×
Ad

7 ಸರಕಾರಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ : ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಪತ್ತೆ

Update: 2025-01-31 21:34 IST

ಬೆಂಗಳೂರು : ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಬೆನ್ನಲ್ಲೇ ಏಳು ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಬೆಂಗಳೂರು ಸೇರಿದಂತೆ 27 ಸ್ಥಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಶುಕ್ರವಾರ ಇಲ್ಲಿನ ಬೆಂಗಳೂರು ನಗರದ ಎರಡು ಕಡೆ, ಬೆಳಗಾವಿಯ ಎರಡು ಸ್ಥಳ, ಬಾಗಲಕೋಟೆ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಒಟ್ಟು 27 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಪತ್ತೆಯಾಗಿದೆ.

ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಮಾಧವ್ ರಾವ್ ನಿವಾಸದ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಿದಾಗ 7 ನಿವೇಶನಗಳು, 2 ವಾಸದ ಮನೆಗಳು, 48.27 ಎಕರೆ ಕೃಷಿ ಜಮೀನು, 97,200 ನಗದು, 55 ಲಕ್ಷ ಮೌಲ್ಯದ ಚಿನ್ನಾಭರಣ, ಬೆಲೆ ಬಾಳುವ ವಾಹನಗಳು ಸೇರಿದಂತೆ ಒಟ್ಟು ಕೋಟ್ಯಾಂತರ ಮೌಲ್ಯದ ಸಂಪತ್ತು ಪತ್ತೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಯತ್ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ನಿವಾಸ ಸೇರಿ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿದ್ದು, ಈ ವೇಳೆ ಮೂರು ನಿವೇಶನಗಳು, 1 ವಾಸದ ಮನೆ, 20,200 ನಗದು, 3.58 ಲಕ್ಷದ ಚಿನ್ನಾಭರಣ, 20 ಲಕ್ಷ ಮೌಲ್ಯದ ವಾಹನ, 6.55 ಲಕ್ಷ ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಚಿತ್ರದುರ್ಗದ ಜಿಲ್ಲಾ ವ್ಯವಸ್ಥಾಪಕ ಕೆ.ಸಿ.ಶಶಿಧರ್‌ ಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಒಂದು ನಿವೇಶನ, ವಾಸದ ಮನೆ, 9-14 ಎಕರೆ ಕೃಷಿ ಜಮೀನು ಸೇರಿದಂತೆ ಇನ್ನಿತರೆ ಲಕ್ಷಾಂತರ ಮೌಲ್ಯದ ವಸ್ತುಗಳು ಪತ್ತೆಯಾಗಿವೆ.

ಬೆಳಗಾವಿ ಉಪ-ನೋಂದಣಾಧಿಕಾರಿಗಳ ಕಚೇರಿ ಎಫ್‍ಡಿಎ ಸಚಿನ್ ಬಸವಂತ್ ಮಂಡೆಡ್ ನಿವಾಸ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಿದಾಗ 1 ನಿವೇಶನ, ನಿರ್ಮಾಣ ಹಂತದಲ್ಲಿರುವ 1 ವಾಸದ ಮನೆ, 1.12 ಎಕರೆ ಕೃಷಿ ಜಮೀನು. 1,35,000 ನಗದು, 87.27 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಕೋಟಿಗೂ ಅಧಿಕ ಮೌಲ್ಯದ ವಾಹನಗಳು ಪತ್ತೆಯಾಗಿವೆ.

ರಾಯಬಾಗ ತಾಲೂಕಿನ ನಿಲಜಿ ಪಶು ಆಸ್ಪತ್ರೆ ಪಶು ನಿರೀಕ್ಷಕ ಸಂಜಯ್ ಅಣ್ಣಪ್ಪ ದುರ್ಗಣ್ಣವರ್ ನಿವಾಸ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಂಡಿದ್ದು, ಈ ವೇಳೆ 4 ನಿವೇಶನಗಳು, 1 ವಾಸದ ಮನೆ, 1 ಎಕರೆ ಕೃಷಿ ಭೂಮಿ ಹಾಗೂ 74,07,514 ಮೌಲ್ಯದ ಒಟ್ಟು ಚರ ಆಸ್ತಿಯ ಪತ್ತೆಯಾಗಿದೆ.

ಬಾದಾಮಿ ತಾಲೂಕಿನ ಹುಲಗೇರಿ ಗ್ರಾಮ ಪಂಚಾಯಿತಿ ಪಿಡಿಓ ಶಿವಲಿಂಗಯ್ಯ ಪಂಚಾಕ್ಷರಯ್ಯ ಹಿರೇಮಠ ಮನೆ ಸೇರಿದಂತೆ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಲಾಗಿದ್ದು, ಈ ವೇಳೆ ತಲಾ ಒಂದು ನಿವೇಶನ, ಮನೆ ಹಾಗೂ 1.43 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು ಚರ ಆಸ್ತಿಯ ಬೆಳಕಿಗೆ ಬಂದಿದೆ.

ಅದೇ ರೀತಿ, ರಾಯಚೂರು ಜಿಲ್ಲಾ ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ನರಸಿಂಗ ರಾವ್ ಗುಜ್ಜಾರ್‍ಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿದಾಗ 5 ನಿವೇಶನಗಳು, 2 ವಾಸದ ಮನೆಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿ ಇತರೆ ವಸ್ತುಗಳು ಪತ್ತೆಯಾಗಿವೆ.

ಈ ದಾಳಿ ಪ್ರಕರಣ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News