×
Ad

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ಮುನ್ಸೂಚನೆ

Update: 2025-02-12 19:35 IST

ಮಲ್ಲಿಕಾರ್ಜುನ ಖರ್ಗೆ | PC : PTI

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಹುದ್ದೆಗೆ ಪಕ್ಷದ ನಾಯಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಸಾಧ್ಯತೆಗಳಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಬುಧವಾರ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೆಲವು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ನಡೆಸಲಾಗುತ್ತಿದ್ದು, ಇತ್ತೀಚೆಗೆ ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳ ಅಧ್ಯಕ್ಷರ ಬದಲಾವಣೆ ನಡೆಯಲಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಿರ್ದಿಷ್ಟವಾಗಿ ನಾನು ಏನೂ ಹೇಳಲು ಸಾಧ್ಯವಿಲ್ಲ. ಬಾಕಿ ಉಳಿದ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಬದಲಾವಣೆ ಆಗುತ್ತದೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ. ಇನ್ನು ಎಂಟು ದಿನಗಳಲ್ಲಿ ನಮ್ಮಿಂದಲೇ ಪ್ರಕಟಣೆ ಹೊರ ಬೀಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿವರಣೆ ನೀಡಿದರು.

‘ರಾಜ್ಯದ ಸಚಿವರ ಭೇಟಿ ದೊಡ್ಡ ವಿಷಯವೇನೂ ಅಲ್ಲ. ನಾನು ಎಐಸಿಸಿ ಅಧ್ಯಕ್ಷ, ಎಲ್ಲರೂ ಬಂದು ನನ್ನನ್ನು ಭೇಟಿ ಮಾಡುತ್ತಾರೆ. ನಮ್ಮ ರಾಜ್ಯದವರಿಗೆ ಬೇಗ ಭೇಟಿಗೆ ಸಮಯ ಸಿಗುತ್ತದೆ. ನನ್ನ ಭೇಟಿಗೆ ಬರುವವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಡಾ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ ಬರುತ್ತಾರೆ, ಸಿಎಂ ಸಿದ್ದರಾಮಯ್ಯನವರು ಕರೆ ಮಾಡುತ್ತಾರೆ’ ಎಂದು ಖರ್ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News