×
Ad

ಮಂಡ್ಯ | ಬ್ಯಾಂಕ್ ಉದ್ಯೋಗಿ ಶೃತಿ ಸಾವಿನ ಪ್ರಕರಣಕ್ಕೆ ತಿರುವು; ಯುವಕನ ವಿರುದ್ಧ ದೂರು ನೀಡಿದ ಪೋಷಕರು

Update: 2023-08-11 23:29 IST
ಮೃತಪಟ್ಟಿರುವ ಶೃತಿ

ಮಂಡ್ಯ, ಆ.11: ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಎಂ.ವೈ.ಶೃತಿ ಅವರ ಆತ್ಮಹತ್ಯೆಗೆ ಪ್ರೀತಿಸಿ ವಂಚಿಸಿದ ಪ್ರಿಯಕರ ಕಾರಣವೆಂದು ಆಕೆಯ ಪೋಷಕರು ಆರೋಪಿಸಿ, ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಶೃತಿ ಅವರು ಮೂರು ದಿನದ ಹಿಂದೆ ನಗರದ ವಿನಾಯಕ ಬಡಾವಣೆಯ ತನ್ನ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‍ನೋಟ್ ಬರೆದಿಟ್ಟಿದ್ದರು.

ಶುಕ್ರವಾರ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೃತಿ ತಂದೆ ಕೊಳ್ಳೇಗಾಲದ ಮಲ್ಲಪ್ಪ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಮಳವಳ್ಳಿ ತಾಲೂಕಿನ ಮಲ್ಲಿನಾಥಪುರದ ವಾಸಿ ಜಗದೀಶ್‍ಬಾಬು ತನ್ನ ಮಗಳ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿದರು.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ನನ್ನ ಮಗಳು ಶೃತಿ ಮತ್ತು ಜಗದೀಶ್‍ಬಾಬು ಕರ್ತವ್ಯ ನಿರ್ವಹಿಸುತ್ತಿದ್ದು ಪರಸ್ಪರ ಪ್ರೀತಿಸುತ್ತಿದ್ದು, ಚಿಕ್ಕಮಗಳೂರು ಶಾಖೆಗೆ ಶೃತಿ ವರ್ಗಾವಣೆಗೊಂಡಾಗ ಆತನೂ ಅದೇ ಶಾಖೆಗೆ ವರ್ಗಾವಣೆ ಮಾಡಿಸಿಕೊಂಡು ಜತೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಅವರು ಹೇಳಿದರು.

ಈ ನಡುವೆ ಮದುವೆ ಮಾಡಿಕೊಳ್ಳೋಣವೆಂದು ನಮ್ಮ ಮಗಳು ಕೇಳಿದಾಗ, ಕೆಳಜಾತಿಯವಳು ಎಂಬ ಕಾರಣಕ್ಕೆ ಬಾಬು ಮದುವೆ ನಿರಾಕರಿಸಿದ್ದ. ನಂತರ, ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಒಪ್ಪಿಸಿದ್ದೆವು. ಆದರೆ, ಕೊನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಳು ಎಂದು ಅವರು ತಿಳಿಸಿದರು.

ಜಗದೀಶ್‍ಬಾಬು ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದ ಮಲ್ಲಪ್ಪ, ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಶೃತಿ ತಾಯಿ ಜಯಕಾಂತಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News