ʼನಮ್ಮ ಮೆಟ್ರೊʼ | ಸೆ.1ರಿಂದ ನೇರಳೆ ಮಾರ್ಗದಲ್ಲಿ ವಾರದ 5 ದಿನಗಳಲ್ಲಿ ಹೆಚ್ಚುವರಿ ಟ್ರಿಪ್ಗೆ ನಿರ್ಧಾರ
ಬೆಂಗಳೂರು, ಆ.30: ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಿನ ಸಮಯದಲ್ಲಿ ಹೆಚ್ಚುವರಿಯಾಗಿ ಮೆಟ್ರೋ ಟ್ರಿಪ್ ಸೇವೆಯನ್ನು ಸೆ.1ರಿಂದ ಆರಂಭಿಸಲಾಗುವುದು. ನೇರಳೆ ಮಾರ್ಗದಲ್ಲಿ ವಾರದ 5 ದಿನಗಳಲ್ಲಿ ಹೆಚ್ಚುವರಿ ಟ್ರಿಪ್ ಮೆಟ್ರೋ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ ಟ್ರಿಪ್ ನಡೆಸಲಿರುವ ನಮ್ಮ ಮೆಟ್ರೋ, ಮೆಜೆಸ್ಟಿಕ್ ನಿಲ್ದಾಣದಿಂದ ಎಂ.ಜಿ ರೋಡ್‍ವರೆಗೆ ಹೆಚ್ಚುವರಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಬೈಯಪ್ಪನಹಳ್ಳಿಗೆ ತೆರಳುವವರು ಎಂ.ಜಿ ರೋಡ್ ನಿಲ್ದಾಣದಲ್ಲಿ ಇಳಿದು ಬಳಿಕ ಮತ್ತೊಂದು ರೈಲು ಹತ್ತಿ ತೆರಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಾಗೆಯೇ ನಗರದ ಲ್ಯಾಂಗ್‍ಫೆÇೀರ್ಡ್ ಟೌನ್ ನಿಲ್ದಾಣದಲ್ಲಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ವಮಿಕ ಯಂತ್ರ ಹೊರಬಂದಿದೆ. ಎ.21ರಂದು ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಕೊರೆಯಲು ವಮಿಕ ಯಂತ್ರ ಆರಂಭಿಸಿತ್ತು. ಈ ಹಿಂದೆ ಸೌತ್ ರಾಂಪ್, ಡೈರಿ ವೃತ್ತದ ನಡುವೆ 613.2 ಮೀಟರ್ ಸುರಂಗ ಕೊರೆದಿತ್ತು. ಡೈರಿ ಸರ್ಕಲ್-ಲಕ್ಕಸಂದ್ರ ನಿಲ್ದಾಣದ ನಡುವೆ 743.4ಮೀ. ಸುರಂಗ ಕೊರೆದಿತ್ತು.
ರೀಚ್-6ರ 20.991ಕಿ.ಮೀ. ಪೈಕಿ 17.62 ಕಿ.ಮೀ. ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿರುತ್ತದೆ. ರೀಚ್-6ರ ಸುರಂಗ ಮಾರ್ಗದಲ್ಲಿ 9 ಟಿಬಿಎಂಗಳ ಪೈಕಿ 6 ಟಿಬಿಎಂಗಳು ಸುರಂಗ ಕಾಮಗಾರಿ ಪೂರ್ಣ ಗೊಳಿಸಿವೆ ಎಂದು ಪ್ರಕಟನೆ ತಿಳಿಸಿದೆ.