×
Ad

ಬೆಂಗಳೂರು| ಪಿಜಿಗೆ ನುಗ್ಗಿ ಯುವತಿ ಹತ್ಯೆ ಪ್ರಕರಣ; ಆರೋಪಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ

Update: 2024-07-27 21:38 IST

ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿಯ ಹತ್ಯೆಗೈದ ಪ್ರಕರಣದಡಿ ಬಂಧಿತ ಆರೋಪಿಯನ್ನು 10 ದಿನಗಳ ಕಾಲ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ ನಗರದ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

ಕೃತಿ ಕುಮಾರಿ(24) ಹತ್ಯೆಯಾದ ಯುವತಿಯಾಗಿದ್ದು, ಮಧ್ಯಪ್ರದೇಶದ ಭೋಪಾಲ್‍ನ ಅಭಿಷೇಕ್ ಘೋಷ್ ಬಂಧಿತ ಆರೋಪಿಯಾಗಿದ್ದಾನೆ.

ಜು.23ರ ರಾತ್ರಿ ಮಹಿಳಾ ಪಿ.ಜಿ.ಗೆ ನುಗ್ಗಿ ಚಾಕುವಿನಿಂದ ಇರಿದು ಬಿಹಾರದ ಕೃತಿ ಕುಮಾರಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ, ಕೃತಿ ಕುಮಾರಿ ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಜು.26ರ ಶುಕ್ರವಾರ ಮಧ್ಯಪ್ರದೇಶದ ರಾಯ್‍ಸನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಬಿಎಸ್‍ಸಿ ವ್ಯಾಸಂಗ ಮಾಡಿದ್ದರೆ, ಹತ್ಯೆಯಾದ ಕೃತಿಕುಮಾರಿ ಎಂಬಿಎ ಮುಗಿಸಿ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಟವರ್ ಲೊಕೇಶನ್ ಜೊತೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಯು ಪಿ.ಜಿ.ಯಲ್ಲಿ ಮೃತ ಕೃತಿಕುಮಾರಿಯ ರೂಮ್‍ಮೇಟ್‍ನ ಪ್ರಿಯಕರ ಎಂದು ಹೇಳಲಾಗಿದೆ. ನಿರುದ್ಯೋಗಿ ಎಂಬ ಕಾರಣಕ್ಕೆ ಆರೋಪಿ ಮತ್ತು ರೂಮ್‍ಮೇಟ್ ಇಬ್ಬರೂ ಜಗಳವಾಡುತ್ತಿದ್ದರು. ಆಗಾಗ್ಗೆ ಜಗಳ ಸಂಭವಿಸಿದಾಗ ಕೃತಿಕುಮಾರಿ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ರಾಜಿ ಮಾಡಿಸುತ್ತಿದ್ದಳು. ಆ ವ್ಯಕ್ತಿಯಿಂದ ದೂರವಿರುವಂತೆ ತನ್ನ ರೂಮ್‍ಮೇಟ್‍ಗೆ ಕೃತಿಕುಮಾರಿ ಸಲಹೆ ನೀಡಿದ್ದಾಳೆ. ಇದು ಕೃತಿ ಕುಮಾರಿಯನ್ನು ಹತ್ಯೆ ಮಾಡಲು ಆರೋಪಿಯನ್ನು ಪ್ರೇರೇಪಿಸಿರುವುದಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಪಿ.ಜಿ. ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತಿ ಕುಮಾರಿ ಹತ್ಯೆಯ ದೃಶ್ಯ ಸೆರೆಯಾಗಿದ್ದು, ದೃಶ್ಯದಲ್ಲಿ ಕೃತಿಕುಮಾರಿ ಇರುವ ರೂಮಿನ ಬಾಗಿಲನ್ನು ವ್ಯಕ್ತಿಯು ತಟ್ಟುತ್ತಿರುವುದು ಕಂಡುಬಂದಿದೆ. ಒಳಗೆ ನುಗ್ಗಿ ಆಕೆಯನ್ನು ಕಾರಿಡಾರ್ ಗೆ ಎಳೆದುತಂದು ಗೋಡೆಗೆ ತಲೆಯನ್ನು ಹೊಡೆದಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಆತ ಕೃತಿ ಕುಮಾರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳುವುದು ದೃಶ್ಯದಲ್ಲಿ ಸೆರೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News