ಕಾವೇರಿ ನದಿ ನೀರು ವಿವಾದ: ಸುಪ್ರೀಂ ಆದೇಶ ಮರುಪರಿಶೀಲನೆಗೆ ಸಂಸದೆ ಸುಮಲತಾ ಮನವಿ
ಮಂಡ್ಯ, ಸೆ.21: ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಒಂದು ರಾಜ್ಯದ ಪರವಾಗಿದ್ದು, ಮತ್ತೊಂದು ರಾಜ್ಯದ ಜನತೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ತೀರ್ಪಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆ ನಡೆಸಿ ಪತ್ರಿಕಾ ಹೇಳಿಕೆ ನೀಡಿರುವ ಸುಮಲತಾ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲಸಬೇಕೆಂದು ಮನವಿ ಮಾಡಿದ್ದಾರೆ.
ಕಾವೇರಿ ನದಿ ನೀರು ವಿವಾದಗಾಗಿ ನಡೆಯುವ ಹೋರಾಟದಲ್ಲಿ ನಾನು ಮಂಡ್ಯ ಮತ್ತು ಕರ್ನಾಟಕದ ಇತರ ಭಾಗಗಳ ರೈತರ ಪರವಾಗಿ ನಿಲ್ಲುತ್ತೇನೆ. ರೈತರಿಗೆ ಸಹಾಯ ಮಾಡಲು ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸಲು ನಾನು ಬದ್ಧಳಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಆದೇಶವು ಕರ್ನಾಟಕದಲ್ಲಿ ನೀರಿನ ಕೊರತೆಯನ್ನು ಇನ್ನಷ್ಟು ಉಲ್ಬಣಗೊಸುತ್ತದೆ ಮತ್ತು ರೈತರ ಬದುಕನ್ನು ಅಪಾಯಕ್ಕೆ ತಳ್ಳುತ್ತದೆ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳ `ಜನತೆಗೆ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ)ಪು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿ, ಇಲ್ಲಿನ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ, ಸುಪ್ರೀಂ ಕೋರ್ಟ್‍ಗೆ ವರದಿ ಸಲ್ಲಿಸಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮಧ್ಯೆ ಪ್ರವೇಶ ಮಾಡುವ ಸಂದರ್ಭ ಇಲ್ಲ. ಕಾವೇರಿ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಪರಸ್ಪರ ಕುಳಿತು ಮಾತನಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
“ಸುಪ್ರೀಂ ಕೋರ್ಟ್ ನೀಡಿರುವ ಆದೇಶ ನನಗೆ ಅಘಾತ ತಂದಿದ್ದು, ತೀವ್ರ ನಿರಾಸೆಯಾಗಿದೆ. ಈಗಾಗಲೇ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯದ ರೈತರಿಗೆ ಈ ಆದೇಶದಿಂದ ಅನ್ಯಾಯವಾಗಿದೆ. ಹದಿನೈದು ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶವು ವಾಸ್ತವಕ್ಕೆ ಹತ್ತಿರವಾಗಿರುವುದಿಲ್ಲ.”
-ಸುಮಲತಾ ಅಂಬರೀಶ್, ಸಂಸದೆ.