13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಎಪಿಎಲ್‍ಗೆ ವರ್ಗಾವಣೆ : ಕೆ.ಎಚ್.ಮುನಿಯಪ್ಪ
ಬೆಳಗಾವಿ : ಕೇಂದ್ರ ಸರಕಾರದ ಮಾನದಂಡಗಳ ಆಧಾರದ ಮೇಲೆ ಸುಮಾರು 13 ಲಕ್ಷ ಬಿಪಿಎಲ್ ಪಡಿತರ ಚೀಟಿಗಳು ಅನರ್ಹವಾಗಿದ್ದು, ಇವುಗಳನ್ನು ಎಪಿಎಲ್‍ಗೆ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಹ ಫಲಾನುಭವಿಗಳನ್ನು ಶೀಘ್ರದಲ್ಲಿ ಗುರುತಿಸಬೇಕು. ಜೊತೆಗೆ ಅನರ್ಹರನ್ನು ಮಾತ್ರ ಎಪಿಎಲ್‍ಗೆ ವರ್ಗಾಯಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಇತರೆ ರಾಜ್ಯಗಳ ಮಾನದಂಡಗಳನ್ನು ಸಹ ತಾವು ಸಂಗ್ರಹಿಸಿ ಅವುಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 3.96 ಲಕ್ಷ ಪಡಿತರ ಚೀಟಿಗಳನ್ನು ಒಂದು ತಿಂಗಳೊಳಗೆ ಪರಿಷ್ಕರಣೆ ಮಾಡಿ ನೂತನ ಕಾರ್ಡ್ ನೀಡಲು ಕ್ರಮ ವಹಿಸುವಚಿತೆ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಡಿತರ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಕಾರ್ಡನ್ನು ಇಕೆವೈಸಿ ಮಾಡಿಸಬೇಕು. ಪಡಿತರ ಪರಿಷ್ಕರಣೆಯ ಕಾರ್ಯ ಸಮರ್ಪಕವಾಗಿರಲಿ ಮತ್ತು ಅರ್ಹರು ಒಂದು ವೇಳೆ ಪರಿಷ್ಕರಣೆ ವೇಳೆ ಎಪಿಎಲ್ ಗೆ ಬದಲಾಗಿದ್ದಲ್ಲಿ ಅದನ್ನು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರ ಕಚೇರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರೆ, ಅದನ್ನು ಪರಿಶೀಲನೆ ಮಾಡಿ ಪುನಃ ಬಿಪಿಎಲ್ ಗೆ ವರ್ಗಾಯಿಸಲಾಗುತ್ತದೆ ಎಂದು ಅವರು ತಿಳಿಸಿದರು.
ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಅರ್ಹ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ, ಪಡಿತರ ಕಾರ್ಡ್ ಅನ್ನು ಪರಿಶೀಲನೆ ಮಾಡಿ ಸತ್ಯಾಂಶವನ್ನು ನಮಗೆ ಒಂದು ವಾರದೊಳಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಮಾನದಂಡಗಳ ನಿರ್ದೇಶನದಂತೆ ಅನರ್ಹ ಬಿಪಿಎಲ್ ಕಾರ್ಡುಗಳನ್ನು ಪತ್ತೆ ಹಚ್ಚಿ ಎಪಿಎಲ್ ಆಗಿ ಪರಿವರ್ತಿಸುವುದಾಗಿದೆ. ಆದರೆ, ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳನ್ನು ರದ್ದು ಮಾಡಬಾರದು ಎಂದು ಸೂಚಿಸಿದ್ದೇನೆ ಎಂದು ಮುನಿಯಪ್ಪ ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ನ್ಯಾಯಬೆಲೆ ಅಂಗಡಿಗಳನ್ನು ಆಧ್ಯಾತೆಯ ಮೇಲೆ ಮಂಜೂರು ಮಾಡಲು ಒಂದು ತಿಂಗಳೊಳಗೆ ಕ್ರಮ ವಹಿಸಲಾಗುವುದು. ಇದರಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಸುಮಾರು 3517 ನೂತನ ನ್ಯಾಯ ಬೆಲೆ ಅಂಗಡಿಗಳನ್ನು ಒಳ ಮೀಸಲಾತಿ ಆಧಾರದ ಮೇಲೆ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ನ್ಯಾಯಬೆಲೆ ಅಂಗಡಿ ಮಾಲಕರಿಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು. ನ್ಯಾಯ ಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಅಳವಡಿಕೆಗೆ ಮುಂದಾಗಬೇಕು. ತಮಗೆ ಬರುವ ಚಿಲ್ಲರೆ ಲಾಭಾಂಶವನ್ನು ಸರಿಯಾದ ಸಮಯಕ್ಕೆ ಸಮರ್ಪಕವಾಗಿ ನೀಡಲಾಗುತ್ತದೆ. ತಾವು ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಪಡಿತರ ವಿತರಿಸಬೇಕು ಎಂದು ಮುನಿಯಪ್ಪ, ನ್ಯಾಯ ಬೆಲೆ ಅಂಗಡಿ ಮಾಲಕರಿಗೆ ಸೂಚಿಸಿರುವುದಾಗಿ ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ. ಬೆಲೆಯಂತೆ ಖರೀದಿಸಲಾಗುತ್ತಿದೆ. ಈಗಾಗಲೇ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರೈತರು ನೊಂದಣಿ ಮಾಡಿಕೊಂಡಿದ್ದಾರೆ. ಇದರಿಂದ ಒಟ್ಟು 3000 ಕೋಟಿ ರೂ.ಗಳೊಂದಿಗೆ 2.57 ಲಕ್ಷ ರೈತರಿಗೆ ಈ ಯೋಜನೆಯು ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ವತಿಯಿಂದ ಬೆಳಗಾವಿ ಮತ್ತು ಕಲಬುರಗಿ ವಿಭಾಗದಲ್ಲಿ ಸುಮಾರು 71 ಸಕ್ಕರೆ ಕಾರ್ಖಾನೆಗಳ ತಪಾಸಣೆ ಮಾಡಿದ್ದು, ಕಬ್ಬು ಬೆಳೆಗಾರರ ಹಿಂದೆ ಇದ್ದ ಲೋಪದೋಷಗಳನ್ನು ಸರಿಪಡಿಸಲಾಗಿದೆ. ತೂಕದಲ್ಲಿ ಮೋಸವನ್ನು ತಡೆಯಲಾಗಿದೆ ಎಂದು ಮುನಿಯಪ್ಪ ಹೇಳಿದರು.
ಸಭೆಯಲ್ಲಿ ಆಹಾರ ಸರಕಾರದ ಕಾರ್ಯದರ್ಶಿ ಪ್ರಸಾದ್ ಎನ್.ವಿ, ಆಯುಕ್ತೆ ಎಂ.ಕನಗವಲ್ಲಿ, ಕಾನೂನು ಮಾಪನ ಇಲಾಖೆಯ ನಿಯಂತ್ರಕ ಎಂ.ಎಸ್.ಎನ್.ಬಾಬು, ನಿಗಮ ನಿರ್ದೇಶಕ ಜಗದೀಶ್, ಜಂಟಿ ನಿರ್ದೇಶಕರಾದ ರಾಜಶೇಖರ್, ಕುಮುದಾ ಹಾಗೂ ಪಡಿತರ ವಿತರಕ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕೃಷ್ಣ ನಾಯಕ್ ಹಾಗೂ ಸಂಘದ ಪಧಾದಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.