×
Ad

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ‌ ಆರೋಪ; ಕಟೀಲ್‌ರನ್ನು ತನಿಖೆಗೆ ಒಳಪಡಿಸಿ, ಪ್ರಕರಣ ಸಿಐಡಿಗೆ ವಹಿಸುವಂತೆ ಕಾಂಗ್ರೆಸ್ ದೂರು

Update: 2023-10-22 22:16 IST

ನಳಿನ್ ಕುಮಾರ್ ಕಟೀಲ್

ಬೆಂಗಳೂರು, ಅ.22: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣದಲ್ಲಿ ಹಣ ನೀಡಿರುವ ವ್ಯಕ್ತಿ ಶಿವಮೂರ್ತಿ ಅವರು ನೀಡಿದ ದೂರಿನ ಅನ್ವಯ ಕೂಡಲೇ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ತನಿಖೆಗೆ ಒಳಪಡಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಮೋಹನ್ ಅವರಿಗೆ ದೂರು ನೀಡಿದ್ದಾರೆ.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತನಿಖೆಗೆ ಒಳಪಡಿಸುವ ಮೂಲಕ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ಬಿಜೆಪಿ ಪಕ್ಷದ ನಾಯಕರೆಂದು ಹೇಳಿಕೊಂಡಿರುವ ಆರೋಪಿಗಳಾದ ಶೇಖರ್ ಹಾಗೂ ರೇವಣ್ಣ ಸಿದ್ದಪ್ಪ ಹಾಗೂ ಇತರರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಿವೃತ್ತ ಅಧಿಕಾರಿ ಶಿವಮೂರ್ತಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಎರಡು ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆಂದು ಕೊಟ್ಟೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಸಹ ಕೇಳಿಬಂದಿದ್ದು, ಅವರ ವಿರುದ್ಧ ಕ್ರಮ ಜರುಗಿಸಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಹಾಗೂ ದೂರುದಾರ ಶಿವಮೂರ್ತಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News