VIDEO- ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಹಲವು ಬಸ್ ಗಳು ಬೆಂಕಿಗಾಹುತಿ
ಬೆಂಗಳೂರು, ಅ.30: ರಾಜಧಾನಿ ಬೆಂಗಳೂರಿನ ಹೊಸಕೆರೆಹಳ್ಳಿ ವ್ಯಾಪ್ತಿಯಲ್ಲಿರುವ ವೀರಭದ್ರನಗರದ ಗ್ಯಾರೇಜ್‍ವೊಂದರಲ್ಲಿ ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಮಾರು 19 ಖಾಸಗಿ ಬಸ್‍ಗಳು ಬೆಂಕಿಗಾಹುತಿಯಾಗಿವೆ.
ಇತ್ತೀಚೆಗೆ ಅತ್ತಿಬೆಲೆ ಪಟಾಕಿ ದುರಂತ, ಕೋರಮಂಗಲದ ಪಬ್‍ನಲ್ಲಿ ಸಿಲಿಂಡರ್ ಸ್ಪೋಟ ಸೇರಿದಂತೆ ಒಂದು ತಿಂಗಳಿನಲ್ಲಿ ಸುಮಾರು 5ರಿಂದ 6 ಬೆಂಕಿ ಅವಘಡಗಳ ಪ್ರಕರಣಗಳು ನಗರದಲ್ಲಿ ವರದಿಯಾಗಿವೆ.
ಈಗ ವೀರಭದ್ರನಗರದ ಗ್ಯಾರೇಜ್‍ನಲ್ಲಿ ಮತ್ತೊಂದು ಅವಘಡ ನಡೆದಿದ್ದು, ಮೊದಲು ಒಂದು ಬಸ್‍ಗೆ ಹೊತ್ತಿಕೊಂಡ ಬೆಂಕಿ ಗಾಳಿಗೆ ಪಕ್ಕದಲ್ಲಿ ನಿಲ್ಲಿಸಿದ್ದ ಇತರೆ ಬಸ್‍ಗಳಿಗೂ ಬೆಂಕಿ ವ್ಯಾಪಿಸಿದೆ. ಶ್ರೀನಿವಾಸ್ ಎಂಬುವರ ಮಾಲಕತ್ವದ ಎಸ್.ವಿ.ಕೋಚ್ ವಕ್ರ್ಸ್ ಹೆಸರಿನ ಗ್ಯಾರೇಜ್ ಇದಾಗಿದ್ದು, ಇಲ್ಲಿ ಹಲವು ವರ್ಷಗಳಿಂದ ಹೊಸ ಮತ್ತು ಹಳೆ ಬಸ್‍ಗಳ ಚಾರ್ಸಿಗೆ ಬಾಡಿ ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು. ಹಠಾತ್ ಕಾಣಿಸಿಕೊಂಡ ಬೆಂಕಿ ಗ್ಯಾರೇಜ್‍ನಲ್ಲಿ ನಿಂತಿರುವ ಬಸ್‍ಗಳಿಗೆ ಆವರಿಸಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಅಗ್ನಿ ಅವಘಡ ಕಂಡು ಬಂದ ತಕ್ಷಣ ಸ್ಥಳೀಯರು ಹತ್ತಿರದ ಪೊಲೀಸ್ ಠಾಣೆ ಮತ್ತು ಬಿಬಿಎಂಪಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.
ಈ ಅವಘಡದಿಂದ ಶೆಡ್‍ನಿಂದ ದಟ್ಟ ಹೊಗೆ ಬರಲಾರಂಭಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಸಮಯ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಆದರೆ, ಈವರೆಗೂ ಘಟನೆಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದಿಲ್ಲ. ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್ ಗಳು ಇದ್ದವು. ಅದೃಷ್ಟವಶಾತ್ ಸಿಲಿಂಡರ್ ಗೆ ತಾಗಿಲ್ಲ. ಅಲ್ಲದೆ 30 ಬಸ್‍ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರ್‍ವಾಡ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನೂ ಗ್ಯಾರೇಜ್ ಇರುವ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿದ್ದರಿಂದ ಪೊಲೀಸರು ಸಂಚಾರ ದಟ್ಟಣೆಯನ್ನು ತಿಳಿಗೊಳಿಸಿದ್ದಾರೆ.
ಇನ್ನು ಗ್ಯಾರೇಜ್‍ನಲ್ಲಿ ಸಾಮಾನ್ಯವಾಗಿ ನಿತ್ಯ 25ರಿಂದ 30 ಬಸ್‍ಗಳು ರಿಪೇರಿಗೆ ಇರುತ್ತವೆ. ಜತೆಗೆ 30 ಜನರು ಅಲ್ಲಿ ದಿನನಿತ್ಯ ಕೆಲಸ ಮಾಡುತ್ತಾರೆ. ಸೋಮವಾರ ಕಟ್ಟಿಂಗ್ ಹಾಗೂ ವೆಲ್ಡಿಂಗ್ ಕೆಲಸ ಮಾಡುವ ವೇಳೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇರಬಹುದಾಗಿದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.