ಶಿಕ್ಷಣ ಪದ್ಧತಿಯ ಸಂರಚನೆ ಬದಲಿಸಿದರೆ ಗುಣಮಟ್ಟ ಬದಲಾಗುವುದಿಲ್ಲ: ಡಾ.ವಿ.ಪಿ. ನಿರಂಜನಾರಾಧ್ಯ
ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ
ಬೆಂಗಳೂರು: ಶಿಕ್ಷಣ ಪದ್ಧತಿಯ ಸಂರಚನೆಯನ್ನು ಬದಲಿಸಿದರೆ ಗುಣಮಟ್ಟ ಬದಲಾಗುತ್ತದೆ ಎಂಬುದು ಅವೈಜ್ಞಾನಿಕ. ಜೊತೆಗೆ ಕೋರ್ಸ್ ಅವಧಿ ಬದಲಾವಣೆ ಮಾಡುವುದರಿಂದಲೂ ಗುಣಮಟ್ಟದ ಖಾತ್ರಿ ಇರುವುದಿಲ್ಲ ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ತಿಳಿಸಿದ್ದಾರೆ.
ಬುಧವಾರ ನಗರದ ಕಬ್ಬನ್ ಪಾರ್ಕ್ ನಲ್ಲಿರುವ ಸಚಿವಾಲಯ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಆಯೋಜಿಸಿದ್ದ ‘ರಾಜ್ಯ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಸರಕಾರ ಬಂದಾಗ ಶಿಕ್ಷಣ ಪದ್ಧತಿ ಬದಲಿಸುವುದು ಸಮಂಜಸವಲ್ಲ. ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಯಾವ ಆಧಾರದಲ್ಲಿ ಒಪ್ಪಬೇಕು? ಯಾವ ತಳಹದಿಯ ಮೇಲೆ ಇದು ರೂಪುಗೊಂಡಿದೆ ಎಂಬುದರ ಮೇಲೆ ಗಂಭೀರ ಚರ್ಚೆ ಆಗಬೇಕಾಗುತ್ತದೆ. ಜೊತೆಗೆ ಸಂರಚನೆಯನ್ನು ಮಾಡಿಕೊಳ್ಳುತ್ತ ನಿರಂತರತೆಯನ್ನು ಉಳಿಸಿಕೊಳ್ಳುವುದು ಹೇಗೆ ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ಬದಲಾವಣೆ ಆಗಿದೆ ಎಂಬುದನ್ನು ಗಮನಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಾಹಿತಿ, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಲು ಪಿಯುಸಿ ಪರೀಕ್ಷಾಂಗವನ್ನು ಶಾಲಾ ಶಿಕ್ಷಣ ಇಲಾಖೆಗೆ ಸೇರ್ಪಡೆ ಮಾಡಿರುವ, ಇಲಾಖೆಯ ಪದನಾಮ ಬದಲಿಸಿರುವ ಹಾಗೂ ಮೇಲುಸ್ತುವಾರಿ ಹೊಣೆಗಾರಿಕೆ ವರ್ಗಾಯಿಸಿರುವ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಕೊನೆಯ ನಾಲ್ಕು ವರ್ಷಗಳನ್ನು ಸೆಕೆಂಡರಿ ಎಜುಕೇಶನ್ ಎನ್ನಲಾಗಿದ್ದು, ಪಿಯು ಶಿಕ್ಷಣ ಎಂದು ಕರೆದಿಲ್ಲ. ರಾಜ್ಯ ಸರಕಾರವೂ ಈ ವಿಚಾರದಲ್ಲಿ ದ್ವಂದ್ವದಲ್ಲಿದ್ದು, 2023ರಲ್ಲಿ ಪಿಯು ಶಿಕ್ಷಣ ಪದ್ಧತಿಯ ಮೇಲುಸ್ತುವಾರಿ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಯಿಂದ ಜಿಲ್ಲಾ ಪಂಚಾಯಿತಿ ಸಿಇಒ, ಅಪರ ಆಯುಕ್ತರಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಶಿಕ್ಷಣ ನೀತಿ ಸಂಬಂಧ ರಚಿಸಿರುವ ಪ್ರೊ. ಸುಖ್‌ದೇವ್ ಥೋರಟ್ ಸಮಿತಿ ಅಧ್ಯಯನ ಕೈಗೊಂಡು ವರದಿ ಸಲ್ಲಿಸಲು ಇನ್ನೊಂದು ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ಥೋರಟ್ ಸಮಿತಿಗೆ ಹಾಗೂ ಸರಕಾರಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ, ಪಿಯು ಶಿಕ್ಷಣ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ಶೈಕ್ಷಣಿಕ ಮಹತ್ವದ ಅರಿವಿನೊಂದಿಗೆ ಹಕ್ಕೊತ್ತಾಯ ಮಂಡಿಸಬೇಕಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಪ್ರೊ. ಎಲ್.ಎನ್. ಮುಕುಂದ ರಾಜ್, ಶಿಕ್ಷಣ ತಜ್ಞ ಡಾ. ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಮಾತನಾಡಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್.ಇದ್ದರು.