×
Ad

ದ್ವೇಷದ ರಾಜಕಾರಣ ಎಚ್‍ಡಿಕೆ ಡಿಎನ್‍ಎಯಲ್ಲೇ ಇದೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-03-20 17:35 IST

ಡಿ.ಕೆ.ಶಿವಕುಮಾರ್

ಬೆಂಗಳೂರು : ‘ದ್ವೇಷ ರಾಜಕಾರಣ ಎಂಬುದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಡಿಎನ್‍ಎ ಯಲ್ಲಿಯೇ ಇದೆ. ಕೇತಗಾನಹಳ್ಳಿ ಜಮೀನು ಒತ್ತುವರಿ ಸಂಬಂಧ ಕೇಸ್ ದಾಖಲಿಸಿರುವುದು ಎಸ್.ಆರ್.ಹಿರೇಮಠ್. ಕೋರ್ಟ್ ಆದೇಶದಂತೆ ಅಧಿಕಾರಿಗಳು ಸರ್ವೇ ಕೈಗೊಂಡಿದ್ದು, ಇದರಲ್ಲಿ ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ನನ್ನ ಮೇಲೂ ಹಿರೇಮಠ್ ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ? ಎಂದರು.

ಮರ್ಯಾದೆಯಾಗಿ ಇದ್ದರೆ ಕ್ಷೇಮ: ನನ್ನ ವಿರುದ್ಧ ಮೈಸೂರಿನಲ್ಲಿ ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದರು, ಅವರ ತಂದೆ ನನ್ನ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ. ನನ್ನ ಮೇಲೆ, ನನ್ನ ಪತ್ನಿ, ನನ್ನ ತಂಗಿ ಹಾಗೂ ಸಹೋದರನ ಮೇಲೆ ಏನೆಲ್ಲಾ ಕೇಸ್ ಹಾಕಿದ್ದರು. ನನಗೂ ಬಳ್ಳಾರಿಗೂ ಸಂಬಂಧವಿಲ್ಲ. ಆದರೂ ಅದಿರು ಕಳ್ಳತನ ಮಾಡಿದ್ದೇನೆ ಎಂದು ಆರೋಪ ಮಾಡಿರಲಿಲ್ಲವೇ? ಎಂದು ಅವರು ಕೇಳಿದರು.

ನನ್ನ ವಿರುದ್ಧ ಕುಮಾರಸ್ವಾಮಿ ತನಿಖೆ ಮಾಡಿಸಿಲ್ಲವೇ?. ಅವರ ಜತೆ ಸರಕಾರ ಮಾಡಿದ್ದೇವೆ ಎಂದು ನಾವು ಸುಮ್ಮನೆ ಇದ್ದೇವೆ. ಅವರು ಮರ್ಯಾದೆಯಾಗಿ ಇದ್ದರೆ ಕ್ಷೇಮ’ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ವಾಗ್ದಾಳಿ ನಡೆಸಿದರು.

ಜನರಿಗೆ ಒಳ್ಳೆಯದು ಬಯಸೋದು ತಪ್ಪಾ?: ‘ರಾಮನಗರ ಜಿಲ್ಲೆ ಮರುನಾಮಕರಣ ಮಾಡಬಾರದು ಎಂದು ಕೇಂದ್ರಕ್ಕೆ ಒತ್ತಡ ಹಾಕಿದ್ದಾರೆ. ನಮಗೂ ಕಾನೂನು ಗೊತ್ತಿದೆ. ಸಂವಿಧಾನದಲ್ಲಿ ನಾವು ಯಾರನ್ನೂ ಕೇಳುವ ಅಗತ್ಯವಿಲ್ಲ. ನಾವು ಮಾಹಿತಿ ನೀಡಬೇಕೆಂದು ಹೇಳಿ ಪ್ರಸ್ತಾವ ಕಳುಹಿಸಿದ್ದೇವೆ ಎಂದು ಶಿವಕುಮಾರ್ ನುಡಿದರು.

ಹೊಸದಿಲ್ಲಿಯಲ್ಲಿರುವ ಕೆಲ ಮಂತ್ರಿಗಳು ಈ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ. ನಾವು ಅದಕ್ಕೆಲ್ಲ ಜಗ್ಗುವುದಿಲ್ಲ. ಜಿಲ್ಲೆ ಮರುನಾಮಕರಣ ಮಾಡುವುದು ಹೇಗೆ, ಜಿಲ್ಲೆಯನ್ನು ಹೇಗೆ ಬದಲಾಯಿಸಬೇಕು ಎಂದು ಗೊತ್ತಿದೆ, ನಾವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಪೆನ್ನಾರ್ ನದಿ ನೀರಿನ ವಿಚಾರವಾಗಿ ಕೋರ್ಟ್ ಆದೇಶದಂತೆ ಕೇಂದ್ರವು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಧಾನ ಸೂತ್ರ ಸಭೆ ನಡೆಸಲು 2-3 ದಿನಾಂಕ ನೀಡಿತ್ತು. ಬೆಳಗಾವಿ ಅಧಿವೇಶನದ ವೇಳೆ ನಾವು ದಿನಾಂಕ ಮರುನಿಗದಿಗೆ ಮನವಿ ಮಾಡಿದ್ದೆ. ಈಗ ಕೇಂದ್ರ ಸರಕಾರ ನ್ಯಾಯಾಲಯಕ್ಕೆ ವರದಿ ನೀಡಬೇಕಿರುವ ಕಾರಣ ಮಾ.18ರಂದು ಸಭೆ ಮಾಡಲು ಆಹ್ವಾನ ನೀಡಿದ್ದರು ಎಂದು ಹೇಳಿದರು.

ಕೊನೆ ಗಳಿಗೆಯಲ್ಲಿ ನಾವು ಪ್ರತ್ಯೇಕವಾಗಿ ನಮ್ಮ ಪ್ರಸ್ತಾವ ಮುಂದಿಡುತ್ತೇವೆ. ಕರ್ನಾಟಕದ ಮುಂದೆ ಕೂತು ಚರ್ಚೆ ಮಾಡುವುದಿಲ್ಲ ಎಂದು ಹೇಳಿತು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸಭೆಯನ್ನು ಮುಂದೂಡಿದ್ದೇವೆಂದು ಸಚಿವರು ಕರೆ ಮಾಡಿ ಅಧಿಕೃತವಾಗಿ ತಿಳಿಸಿದ್ದಾರೆ. ತಮಿಳುನಾಡಿನ ಜೊತೆ ಪ್ರತ್ಯೇಕವಾಗಿ ಕೇಂದ್ರ ಸಚಿವರು ಮಾತನಾಡಲಿದ್ದಾರೆ. ಅವರು ತಮ್ಮ ರಾಜಕೀಯ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿರಬಹುದು. ನಾನು ಈ ಸಭೆಗೆ ಹೋಗುವ ಮುನ್ನ ಸಂಪುಟದಲ್ಲಿ ಈ ವಿಚಾರವನ್ನು ಚರ್ಚೆ ಮಾಡಿ ಸರಕಾರದ ನಿಲುವು ತಿಳಿಸಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News