×
Ad

ಪಿಎಂ ಇ-ಡ್ರೈವ್ ಯೋಜನೆ | ಹಂತ-ಹಂತವಾಗಿ ಕರ್ನಾಟಕಕ್ಕೆ ಎಲೆಕ್ಟ್ರಿಕ್ ಬಸ್ಸುಗಳ ಹಂಚಿಕೆ : ಎಚ್‌.ಡಿ.ಕುಮಾರಸ್ವಾಮಿ

Update: 2025-05-16 18:00 IST

ಹೊಸದಿಲ್ಲಿ : ಕೇಂದ್ರ ಸರಕಾರ ಪ್ರಾಯೋಜಿತ ಪಿಎಂ ಇ-ಡ್ರೈವ್ ಉಪಕ್ರಮದ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ಹಂಚಿಕೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸರಕಾರ ಶುಕ್ರವಾರ ಸಲ್ಲಿಸಿದ ಮನವಿಯನ್ನು ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯವು ಸ್ವೀಕರಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಪಡಿಸುವ ಅಗತ್ಯವನ್ನು ಉಲ್ಲೇಖಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಲ್ಲಿರುವ ಮನವಿಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ದಿಲ್ಲಿಯ ಸಚಿವಾಲಯದಲ್ಲಿ ತಮ್ಮನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ ಜತೆ ಕುಮಾರಸ್ವಾಮಿ ರಾಜ್ಯದ ನಗರ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿದರು. ಅಲ್ಲದೆ, ಕರ್ನಾಟಕ ಸರಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ, ವಿದ್ಯುತ್ ಚಾಲಿತ ಬಸ್ಸುಗಳ ಹಂಚಿಕೆ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ ಮತ್ತು ಕರ್ನಾಟಕಕ್ಕೆ ಹಂತ ಹಂತವಾಗಿ ಮತ್ತು ಆದ್ಯತೆಯ ಮೇರೆಗೆ ವಿದ್ಯುತ್ ಚಾಲಿತ ಬಸ್ಸುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕಕ್ಕೆ ಕೇಂದ್ರದಿಂದ ಸೂಕ್ತ ಬೆಂಬಲ ಸಿಗುತ್ತದೆ ಎಂದು ನಾನು ಖಚಿತಪಡಿಸುತ್ತೇನೆ. ಪ್ರಧಾನಿ ಮೋದಿ ದೂರದೃಷ್ಟಿಯಿಂದ ಪಿಎಂ ಇ-ಡ್ರೈವ್ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಸಾರಿಗೆ ವ್ಯವಸ್ಥೆಯಲ್ಲಿ, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಹನಗಳು ಹೊರಸೂಸುವ ಮಾಲಿನ್ಯವನ್ನು ಶೂನ್ಯಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕರ್ನಾಟಕವೂ ಸೇರಿ ಭಾರತದಾದ್ಯಂತ ವಿದ್ಯುತ್ ಚಾಲಿತ ಬಸ್ಸುಗಳ ಅಳವಡಿಕೆಗೆ ಕೇಂದ್ರ ಸರಕಾರವು ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕವು ಪಿಎಂ ಇ-ಡ್ರೈವ್ ಯೋಜನೆ ಅಡಿಯಲ್ಲಿ ಖಂಡಿತವಾಗಿಯೂ ಹೆಚ್ಚು ಬಸ್ಸುಗಳನ್ನು ಪಡೆಯುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಪಿಎಂ ಇ-ಡ್ರೈವ್ ಉಪಕ್ರಮದಡಿಯಲ್ಲಿ 9 ಪ್ರಮುಖ ನಗರಗಳಿಗೆ 14ಸಾವಿರ ವಿದ್ಯುತ್ ಚಾಲಿತ ಬಸ್‍ಗಳನ್ನು ಹಂಚಿಕೆ ಮಾಡಲಾಗುವುದು. ಚಾರ್ಜಿಂಗ್‌ ಸ್ಟೇಷನ್‍ಗಳು, ಬಸ್ ಡಿಪೊಗಳು ಮತ್ತು ವಾಹನ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಸಂಬಂಧಿತ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಚರ್ಚೆ ನಡೆಸುತ್ತಿವೆ. ಈಗಾಗಲೇ ಗುರುತಿಸಲಾದ ನಗರ ಸಮೂಹಗಳಲ್ಲಿ ಈ ಯೋಜನೆಯ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಚಿವಾಲಾಯದ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾವು ವಿದ್ಯುತ್ ಚಾಲಿತ ಬಸ್ಸುಗಳನ್ನು ವಿತರಿಸುತ್ತಿದ್ದೇವೆ ಎನ್ನುವುದಕ್ಕಿಂತ, ನಾವು ಭಾರತದ ಜನತೆಗೆ ಸ್ವಚ್ಛ, ಚುರುಕಾದ ಮತ್ತು ಹೆಚ್ಚು ಉತ್ತಮವಾದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದೇವೆ. ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಮಾಲಿನ್ಯರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಎಚ್‍ಡಿಕೆ ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾರಂಭಿಸಲಾದ ಪಿಎಂ ಇ-ಡ್ರೈವ್ ಉಪಕ್ರಮವು 14,028 ವಿದ್ಯುತ್ ಚಾಲಿತ ಬಸ್ಸುಗಳೊಂದಿಗೆ ನಗರಗಳಲ್ಲಿ ವಾಯುಮಾಲಿನ್ಯ ರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗೆ ಕೇಂದ್ರದಿಂದ 2ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂ.ಮೊತ್ತವನ್ನು ವೆಚ್ಚ ಮಾಡಲಾಗುತ್ತಿದೆ. ಎಲ್ಲ ರಾಜ್ಯ ಸರಕಾರಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ ಈ ಪರಿವರ್ತನಾಶೀಲ ಗುರಿಯನ್ನು ಪೂರೈಸಲು ಬೃಹತ್ ಕೈಗಾರಿಕಾ ಸಚಿವಾಲಯವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News