×
Ad

ಚನ್ನರಾಯಪಟ್ಟಣ ರೈತರ ಭೂಸ್ವಾಧೀನ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಿಹಾರ ಸಂಸದ

Update: 2025-07-03 22:30 IST

                                                       ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಬಿಹಾರದ ಸಿಪಿಐ(ಎಂಎಲ್) ಪಕ್ಷದ ಲೋಕಸಭಾ ಸದಸ್ಯ ರಾಜಾರಾಮ್ ಸಿಂಗ್ ಅವರು ಚನ್ನರಾಯಪಟ್ಟಣ ರೈತರ ಭೂಸ್ವಾಧೀನವನ್ನು ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ?: ಸಿಪಿಐ(ಎಂಎಲ್) ಲಿಬರೇಶನ್‍ನೊಂದಿಗೆ ಸಂಬಂಧ ಹೊಂದಿರುವ ರೈತರ ಸಂಘಟನೆಯಾದ ಅಖಿಲ ಭಾರತ ಕಿಸಾನ್ ಮಹಾಸಭಾದ ಪರವಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ, ಕರ್ನಾಟಕ ಸರಕಾರವು ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಪ್ರಸ್ತಾವಿತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‍ಗಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿದ್ದೇನೆ. ಇದರ ವಿರುದ್ಧ ರೈತರು ಸುಮಾರು 1186 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಿಮಗೆ ತಿಳಿದಿರುವಂತೆ ದೇವನಹಳ್ಳಿಯ ಸುತ್ತಮುತ್ತಲಿನ ಈ ಪ್ರದೇಶವು ಹೆಚ್ಚು ಫಲವತ್ತಾದ ಭೂಮಿಯನ್ನು ಹೊಂದಿದೆ. ನಗರಕ್ಕೆ ಹಣ್ಣು, ತರಕಾರಿ, ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸುತ್ತದೆ. ಬೆಂಗಳೂರಿನ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಇದು ಸುತ್ತಮುತ್ತಲಿನ ಜಿಲ್ಲೆಗಳೊಂದಿಗೆ ವಾರ್ಷಿಕವಾಗಿ ಅಂದಾಜು 7-8 ಮಿಲಿಯನ್ ಟನ್ ತೋಟಗಾರಿಕಾ ಬೆಳೆಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಹೈನುಗಾರಿಕೆ ಮೂಲಕ ಬೆಂಗಳೂರಿನ ನಂದಿನಿ/ಮದರ್ ಡೈರಿ ಕೇಂದ್ರಕ್ಕೆ ಪ್ರತಿದಿನ 10 ಮಿಲಿಯನ್ ಲೀಟರ್‍ಗಳಿಗಿಂತ ಹೆಚ್ಚು ಹಾಲನ್ನು ತಲುಪಿಸುತ್ತವೆ. ಹೆಚ್ಚಿನ ಬಾಧಿತ ರೈತರು, ಸ್ವಾಧೀನದ ಭಾಗವನ್ನು ಕೈಬಿಡುವ ಅಥವಾ ಕೇವಲ ಪರಿಹಾರವನ್ನು ನೀಡುವ ಯಾವುದೇ ಪರಿಹಾರಗಳನ್ನು ತಿರಸ್ಕರಿಸಿದ್ದಾರೆ. ಬದಲಿಗೆ, ಯಾವುದೇ ಸ್ವಾಧೀನ ಬೇಡ ಎಂದು ಹೇಳಿದ್ದಾರೆ. ರೈತರು ತಮ್ಮ ಕೃಷಿಯನ್ನು ಮುಂದುವರಿಸಲು, ತಲೆಮಾರುಗಳಿಂದ ನಡೆಸುವಕೊಂಡು ಬಂದಿರುವ ಜೀವನ ಮತ್ತು ಜೀವನೋಪಾಯವನ್ನು ಉಳಿಸಿಕೊಂಡಿರುವ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ರಾಜಾರಾಮ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೈಗಾರಿಕೋದ್ಯಮ ಸ್ಥಾಪನೆ ತತ್ವವನ್ನು ಆಧರಿಸಿದ ಬಲವಂತದ ಸ್ವಾಧೀನವು ವಸಾಹತುಶಾಹಿ ಅವಶೇಷವಾಗಿದೆ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ. ಇದಲ್ಲದೆ, ಇಲ್ಲಿಯವರೆಗೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಹೆಚ್ಚಿನ ಭಾಗಗಳು ಬಳಕೆಯಾಗದೆ ಉಳಿದಿವೆ ಎಂಬುದು ಈಗ ಸಾಮಾನ್ಯ ಜ್ಞಾನವಾಗಿದೆ. ಹೀಗಾಗಿ, ಕರ್ನಾಟಕ ಸರಕಾರ ಸೇರಿದಂತೆ ಎಲ್ಲ ಸರಕಾರಗಳು ವಿವಿಧ ಕಾನೂನುಗಳ ಅಡಿಯಲ್ಲಿ ಮತ್ತು ವಿವಿಧ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ಕುರಿತು ಶ್ವೇತಪತ್ರವನ್ನು ಸಿದ್ಧಪಡಿಸಿ ಪ್ರಕಟಿಸುವ ಸಮಯ ಬಂದಿದೆ ಎಂದು ಪತ್ರದಲ್ಲಿ ರಾಜಾರಾಮ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News