ಬೆಂಗಳೂರು | ಖಾಸಗಿ ಸುದ್ದಿ ವಾಹಿನಿ ಸಿಬ್ಬಂದಿ ಹಲ್ಲೆ ಪ್ರಕರಣ: ಆರೋಪಿ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಖಾಸಗಿ ಸುದ್ದಿ ವಾಹಿನಿ ಸಿಬ್ಬಂದಿ ಭವಿತ್ ದೋಣಗುಡಿಗೆ(42) ಎಂಬವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದ ಪ್ರಕರಣದಡಿ ವಿಜಯ್ ಎಂಬಾತನನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಭವಿತ್ ದೋಣಗುಡಿಗೆ ಅವರ ಸ್ನೇಹಿತರೊಬ್ಬರು ನೀಡಿದ ದೂರಿನನ್ವಯ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಯತ್ನ ಆರೋಪದಡಿ ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜುಲೈ 10ರ ರಾತ್ರಿ ರಾಜಾಜಿನಗರದ ಖಾಸಗಿ ಹೋಟೆಲ್‍ನಲ್ಲಿ ಘಟನೆ ನಡೆದಿತ್ತು. ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಹೊಸ ಸಿನಿಮಾಗಳ ಘೋಷಣೆ ಕಾರ್ಯಕ್ರಮವೊಂದರಲ್ಲಿ ಭವಿತ್ ಹಾಗೂ ವಿಜಯ್ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಬಿಯರ್ ಬಾಟಲ್ ಒಡೆದ ವಿಜಯ್, ಭವಿತ್ ಕುತ್ತಿಗೆಯ ಭಾಗಕ್ಕೆ ಚುಚ್ಚಿದ್ದಾನೆ. ನಂತರ ಭವಿತ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.