SIR ಅವಧಿ ಸೆ.17ರ ವರೆಗೆ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ರಮೇಶ್ ಬಾಬು ಒತ್ತಾಯ

Update: 2026-08-12 22:23 IST

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಹೊರಗುಳಿಯದಂತೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‍ಒ)ಮನೆ-ಮನೆ ಭೇಟಿ ಪರಿಶೀಲನಾ ಅವಧಿಯನ್ನು ಸೆ.17ರ ವರೆಗೆ ವಿಸ್ತರಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಬುಧವಾರ ಈ ಸಂಬಂಧ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಆ.17ಕ್ಕೆ ಮುಕ್ತಾಯಗೊಳ್ಳಲಿರುವ ಬಿಎಲ್‍ಒಗಳ ಮನೆ-ಮನೆ ಪರಿಶೀಲನೆ ಹಾಗೂ ಎನ್ಯುಮರೇಷನ್ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸೆ.17ರ ವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 1.08 ಕೋಟಿ ಮತದಾರರನ್ನು ಎಎಸ್‍ಡಿಡಿಓ ವರ್ಗದಲ್ಲಿ ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಪೈಕಿ ಸುಮಾರು ಶೇ.20ರಷ್ಟಾಗಿದೆ. ಎಸ್‍ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಶೇ.92ಕ್ಕೂ ಹೆಚ್ಚು ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೆ, ಈಗ ಎಎಸ್‍ಡಿಡಿಓ ಪಟ್ಟಿಯ ಅಂಕಿಅಂಶಗಳು ಆತಂಕಕಾರಿಯಾಗಿವೆ ಎಂದು ಅವರು ಗಮನ ಸೆಳೆದಿದ್ದಾರೆ.

ಪ್ರಮುಖ ಬೇಡಿಕೆಗಳು: ಬಿಎಲ್‍ಒಗಳ ಮನೆ-ಮನೆ ಭೇಟಿ ಹಾಗೂ ಎನ್ಯುಮರೇಷನ್ ಅರ್ಜಿ ಸ್ವೀಕರಿಸುವ ಅವಧಿಯನ್ನು ಸೆ.17ರವರೆಗೆ ವಿಸ್ತರಿಸಬೇಕು. ಮನೆಯಲ್ಲಿ ಸಿಗದ ಮತದಾರರ ಮನೆಗಳಿಗೆ ಬಿಎಲ್‍ಒಗಳು ಪುನಃ ಭೇಟಿ ನೀಡಬೇಕು. ಎಲ್ಲ ಎಎಸ್‍ಡಿಡಿಓ ಪ್ರಕರಣಗಳನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು ರಮೇಶ್ ಬಾಬು ಆಗ್ರಹಿಸಿದ್ದಾರೆ.

ಎಎಸ್‍ಡಿಡಿಓ ಮತ್ತು ಶಾಶ್ವತ ಸ್ಥಳಾಂತರ ವರ್ಗದಲ್ಲಿರುವವರಿಗೆ ವರ್ಗೀಕರಣ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಬೂತ್ ಮಟ್ಟದಲ್ಲಿ ಸಮರ್ಪಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು. ದುರ್ಬಲ ವರ್ಗದ ಮತದಾರರಿಗೆ ವಿಶೇಷ ನೆರವು ಒದಗಿಸಬೇಕು. ಬಿಎಲ್‍ಒ ಭೇಟಿ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದ ಒಂದೇ ಕಾರಣಕ್ಕೆ ಅರ್ಹ ಮತದಾರರನ್ನು ಕೈಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಬಿಎಲ್‍ಒ ಹಾಗು ಬಿಎಲ್‍ಒ ಮೇಲ್ವಿಚಾರಕರ ಸಂಪರ್ಕ ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ಮತದಾರರ ಹೆಸರು ಎಎಸ್‍ಡಿಡಿಓ ವರ್ಗಕ್ಕೆ ಸೇರಿಸಿರುವ ಕಾರಣ ತಿಳಿದುಕೊಳ್ಳಲು ಪಾರದರ್ಶಕ ವ್ಯವಸ್ಥೆ ಕಲ್ಪಿಸಬೇಕು. ಕರಡು ಮತದಾರರ ಪಟ್ಟಿ ಪ್ರಕಟಿಸುವ ಮುನ್ನ ಎಎಸ್‍ಡಿಡಿಓ ಮತ್ತು ಶಾಶ್ವತ ಸ್ಥಳಾಂತರ ಪ್ರಕರಣಗಳ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ರಮೇಶ್ ಬಾಬು ಕೋರಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News