×
Ad

ಯೂಟ್ಯೂಬರ್ ಸಮೀರ್ ವಿರುದ್ಧದ ಪೊಲೀಸ್‌ ನೋಟಿಸ್‌ಗೆ ಮಧ್ಯಂತರ ತಡೆ

Update: 2025-03-06 19:45 IST

ಸಮೀರ್ ಎಂ.ಡಿ.

ಬೆಂಗಳೂರು: ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧದ ಪೊಲೀಸರ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಎಫ್ಐಆರ್ ಪ್ರತಿ ನೀಡದೆ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಸಮೀರ್ ಎಂ.ಡಿ. ಸಲ್ಲಿಸಿದ್ದ ಅರ್ಜಿ‌ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ, ಪೊಲೀಸರ ನಡೆಗೆ ಅಸಮಾಧಾನ ಹೊರಹಾಕಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇಡೀ ವೀಡಿಯೋದಲ್ಲಿ ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತುಗಳನ್ನು ಆಡಿಲ್ಲ. ಹೀಗಿದ್ದರೂ ಎಫ್​ಐಆರ್​ ಪ್ರತಿ ಇಲ್ಲದೆ, ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ಹೈಕೋರ್ಟ್ ಆದೇಶದ ಅನ್ವಯ ನೋಟಿಸ್ ಜೊತೆಗೆ ಎಫ್ಐಆರ್ ಪ್ರತಿ ನೀಡುವುದು ಕಡ್ಡಾಯವಾಗಿದೆ. ಪ್ರಭಾವಿ ಎಂದು ತೋರಿಸಿದ ಮಾತ್ರಕ್ಕೆ ತರಾತುರಿಯ ನೋಟಿಸ್ ಏಕೆ. ಸುತ್ತೋಲೆ ಪಾಲಿಸದೇ ನೋಟಿಸ್ ನೀಡಿದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಇದಕ್ಕೆ ಸರಕಾರದ ಪರ ವಕೀಲರು, ಅರ್ಜಿದಾರರನ್ನು ಬಂಧಿಸಿಲ್ಲ ಎಂದು ತಿಳಿಸಿದರು. ಇದಕ್ಕೆ ಪುನಃ ಮಧ್ಯಪ್ರವೇಶಿದ ಪೀಠ, ನೋಟಿಸ್​ ಜಾರಿ ಮಾಡಿದ್ದು ಹಾಜರಾಗದಿದ್ದರೆ ಮುಂದಿನ ನಡೆ ಬಂಧನವೇ ಆಗುತ್ತಿತ್ತು. ನಿಯಮಗಳ ಪ್ರಕಾರ ನೋಟಿಸ್​ ಜಾರಿ ಮಾಡದಿದ್ದಲ್ಲಿ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟು, ಬಳ್ಳಾರಿ ಠಾಣೆಯ‌ಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ‌ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News