ರಾಜ್ಯಪಾಲರಿಂದ ರಾಷ್ಟ್ರಗೀತೆ, ಸಂವಿಧಾನಕ್ಕೆ ಅಗೌರವ: ಸಚಿವ ಪ್ರಿಯಾಂಕ್ ಖರ್ಗೆ
"ಆರೆಸ್ಸೆಸ್ ಇಲ್ಲದಿದ್ದರೆ ಬಿಜೆಪಿಯ ಅಸ್ತಿತ್ವವೇ ಇರಲ್ಲ"
ಕಲಬುರಗಿ: ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರು ರಾಷ್ಟ್ರಗೀತೆ ಹಾಗೂ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ, ಜೈ ಸಂವಿಧಾನ ಎಂದು ಉಲ್ಲೇಖಿಸಲಾಗಿತ್ತು. ಆದರೆ ರಾಜ್ಯಪಾಲರು ಭಾಷಣದ ವೇಳೆ ಜೈ ಸಂವಿಧಾನ ಎನ್ನದೇ ಕೋಣೆಯಿಂದ ನಿರ್ಗಮಿಸಿದ್ದು, ಇದು ಸಂವಿಧಾನಕ್ಕೆ ಅಪಮಾನವಾಗಿದ್ದು, ರಾಷ್ಟ್ರಗೀತೆಗೆ ಕೂಡ ಅಗೌರವ ತೋರಿದಂತಾಗಿದೆ ಎಂದು ಹೇಳಿದರು.
ರಾಜ್ಯಪಾಲರಿಗೆ ಬರೆದುಕೊಟ್ಟ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಅವಹೇಳನಕಾರಿ ಮಾತುಗಳಿರಲಿಲ್ಲ. ಸಂಪೂರ್ಣ ಭಾಷಣ ಓದದೆ ಕೇವಲ 37 ಸೆಕೆಂಡ್ ಮಾತನಾಡಿ ನಿರ್ಗಮಿಸಿರುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ನಡೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯಪಾಲರು ತಾಳ್ಮೆಯಿಂದ ಸಂಪೂರ್ಣ ಭಾಷಣ ಓದಿ, ನಂತರ ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕಿತ್ತು. ಅವರ ವರ್ತನೆ ಸಂವಿಧಾನಕ್ಕೆ ತಕ್ಕುದಾಗಿರಲಿಲ್ಲ. ಈ ಕಾರಣದಿಂದ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಶಾಸಕ ಶರತ್ ಬಚ್ಚೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸದ ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸದೇ, ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಮಾತ್ರ ಕ್ರಮಕ್ಕೆ ಬಿಜೆಪಿ ಒತ್ತಾಯಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
“ರಾಜ್ಯಪಾಲರ ನಡೆ ಅಸಂವಿಧಾನಿಕ. ನಮ್ಮ ಭಾಷಣದಲ್ಲಿ ಯಾವುದೇ ಅವಹೇಳನಕಾರಿ ಮಾತಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ, ಸಿ.ಆರ್. ಪಾಟೀಲ್, ಶಿವರಾಜ್ ಸಿಂಗ್ ಚವ್ಹಾಣ ಅವರಿಗೆ ಹಾಗೂ ಕೃಷ್ಣ ಭೈರೇಗೌಡರು ಕೇಂದ್ರಕ್ಕೆ ರಾಜ್ಯದ ಬೇಡಿಕೆಗಳ ಕುರಿತು ಬರೆದಿರುವ ಪತ್ರಗಳ ವಿವರಗಳಷ್ಟೇ ಭಾಷಣದಲ್ಲಿ ಸೇರಿವೆ,” ಎಂದು ಹೇಳಿದರು.
“ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಕೇಳುವುದು ತಪ್ಪೇ? ಬಿವಿಜಿ ರಾಮ್‌ಜಿ ಕಾಯ್ದೆಯಡಿ ರಾಜ್ಯದ ಪಾಲನ್ನು 40% ಎಂದು ನಿಗದಿಪಡಿಸಿದ್ದಾರೆ. ರಾಜ್ಯದ ಅಭಿಪ್ರಾಯ ಕೇಳಿದ್ದಾರಾ? ಅದನ್ನು ಪ್ರಶ್ನಿಸುವುದು ತಪ್ಪೇ? ಆ ವಿಚಾರವನ್ನು ರಾಜ್ಯಪಾಲರ ಮೂಲಕ ಜನರಿಗೆ ತಿಳಿಸುವುದು ತಪ್ಪೇ?” ಎಂದು ಪ್ರಶ್ನಿಸಿದರು.
ರಾಜ್ಯಪಾಲರ ನಡೆ ಕೇಂದ್ರ ಹಾಗೂ ಆರೆಸ್ಸೆಸ್ ನಿರ್ದೇಶನದಂತೆ ನಡೆದಿದೆ. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನದ ಮೇಲೆ ಅಭಿಮಾನವಿಲ್ಲ. ಅದಕ್ಕಾಗಿ ಅವರು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡು, ತೋರಿದ ಅಗೌರವದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು. ಆರೆಸ್ಸೆಸ್ ಇಲ್ಲದಿದ್ದರೆ ಬಿಜೆಪಿ ಪ್ರಾದೇಶಿಕ ಪಕ್ಷವಾಗಿಯೂ ಅಸ್ತಿತ್ವದಲ್ಲಿರಲಾರದು ಎಂದು ವಾಗ್ದಾಳಿ ನಡೆಸಿದರು.
ನರೇಗಾ ಯೋಜನೆ ಬಡವರು, ಹಿಂದುಳಿದವರು ಹಾಗೂ ದಲಿತರ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿತ್ತು. ಅದನ್ನು ರದ್ದುಪಡಿಸಿ ಈಗ ಬಿವಿಜಿ ರಾಮ್‌ಜಿ ಕಾಯ್ದೆ ರೂಪಿಸಲಾಗಿದೆ. ಈ ಕಾಯ್ದೆ ವಿರುದ್ಧ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ನಮ್ಮ ಸರ್ಕಾರ ಈ ಕಾಯ್ದೆ ವಿರುದ್ಧ ಕೋರ್ಟ್‌ಗೆ ಹೋಗಲು ಕ್ಯಾಬಿನೆಟ್‌ನಲ್ಲಿ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ಮಹಿಳಾ ಅಧಿಕಾರಿಯನ್ನು ನಿಂದಿಸಿದ ರಾಜೀವ್ ಗೌಡ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜೀವ್ ಗೌಡನನ್ನು ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ಈಗಾಗಲೇ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಮಹಿಳೆಯರಿಗೆ ನಿರಂತರ ಕಿರುಕುಳ ನೀಡಿರುವ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕರಿಂದ ನಮ್ಮ ಪಕ್ಷ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.