×
Ad

ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗೆ ಪ್ರಜ್ವಲ್ ಅನರ್ಹ; ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರದ ವಾದ

Update: 2025-11-24 18:25 IST

ಪ್ರಜ್ವಲ್ ರೇವಣ್ಣ

ಬೆಂಗಳೂರು : ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಪ್ರಜ್ವಲ್ ರೇವಣ್ಣ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುವುದನ್ನು ತಡೆಯಲು ಅನೇಕ ಬಾರಿ ಯತ್ನಿಸಿದ್ದರು. ಪ್ರಕರಣದಲ್ಲಿ ಅವರು ನಿಜಕ್ಕೂ ಜಾಮೀನಿಗೆ ಅರ್ಹರಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸಿತು.

ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಶೇಷ ತನಿಖಾ ದಳದ (ಎಸ್‌ಐಟಿ) ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು, ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬಗೊಳಿಸಲು ಪ್ರಜ್ವಲ್‌ 10-12 ಬಾರಿ ಪ್ರಯತ್ನ ಮಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ಹಲವು ಬಾರಿ ವಿಚಾರಣೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮುನ್ನ, ದೇಶ ತೊರೆದು ತನಿಖೆಗೂ ಸವಾಲು ಎಸೆದಿದ್ದ ಪ್ರಜ್ವಲ್, ಸಂತ್ರಸ್ತೆಯರ ಜತೆಗಿನ ಲೈಂಗಿಕ ಕೃತ್ಯ ಸೆರೆ ಹಿಡಿದಿದ್ದ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಜರ್ಮನಿಯಲ್ಲಿ ಫೋನ್‌ ಕಳೆದು ಹೋಗಿದೆ ಎಂದು ಹೇಳಿದ್ದಾರೆ. ಇದು ಮೇಲ್ಮನವಿದಾರರ ನಡತೆಯಾಗಿದೆ ಎಂದು ಆಕ್ಷೇಪಿಸಿದರು.

ಪ್ರಜ್ವಲ್ ಕುಟುಂಬ ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿದೆ. ಅಜ್ಜ ಮಾಜಿ ಪ್ರಧಾನಿ, ಚಿಕ್ಕಪ್ಪ ಹಾಲಿ ಕೇಂದ್ರ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ತಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕೃತ್ಯದ ಮಾಹಿತಿ ನೀಡಲು ಬಂದ ಸಂತ್ರಸ್ತೆಗೆ ಅಂದಿನ ಜಿಲ್ಲಾಧಿಕಾರಿ ಸೇರಿ ಯಾರೂ ನೆರವು ನೀಡಿಲ್ಲ. ಬಲಾಢ್ಯರಾಗಿರುವುದರಿಂದಲೇ ಆಕೆಯ ದನಿ ಹತ್ತಿಕ್ಕಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಜಾಮೀನಿಗೆ ಪ್ರಜ್ವಲ್ ಅನರ್ಹ:

ಹಾಲಿ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜಾಮೀನು ಮಂಜೂರು ಮಾಡಿದರೆ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಎದುರಿಸುತ್ತಿರುವ ಆತನ ತಂದೆ ಎಚ್‌.ಡಿ. ರೇವಣ್ಣ ಮತ್ತು ತಾಯಿ ಭವಾನಿ ಅವರ ಜಾಮೀನು ಕೋರಿಕೆ ಮೇಲೆ ಆದೇಶ ಪ್ರಭಾವ ಬೀರಲಿದ್ದು, ಪ್ರಜ್ವಲ್‌ ಇದೇ ಕೃತ್ಯ ಮುಂದುವರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಜಾಮೀನಿಗೆ ಅರ್ಹರಲ್ಲ. ಘನಘೋರ ಮತ್ತು ಹೀನ ಕೃತ್ಯ ಎಸಗಿರುವ ಮೇಲ್ಮನವಿದಾರರಿಗೆ ಜಾಮೀನು ಮಂಜೂರು ಮಾಡಿ, ಆತ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟರೆ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗಲಿದೆ? ಜಾಮೀನು ನೀಡುವುದು ನಿಯಮ, ವಿಶೇಷ ಸಂದರ್ಭದಲ್ಲಿ ಜೈಲು ಶಿಕ್ಷೆ ವಿಧಿಸಬೇಕು ಎಂಬ ನಿಯಮ ಇರುವುದೂ ಸತ್ಯ. ಆದರೆ, ಈ ಪ್ರಕರಣದಲ್ಲಿ ಪ್ರಜ್ವಲ್‌ ಖಂಡಿತವಾಗಿಯೂ ಜಾಮೀನಿಗೆ ಅರ್ಹರಾಗಿಲ್ಲ. ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ದೋಷ ಹುಡುಕಬಾರದು ಎಂದು ಪ್ರತಿಪಾದಿಸಿದರು.

ಸರಕಾರದ ಆಕ್ಷೇಪಣೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ನವೆಂಬರ್ 25) ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News