SIR ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಪ್ರಕಾಶ್ ರಾಜ್, ಹಲವು ನಾಗರಿಕ ಸಂಘಟನೆಗಳು ಆಗ್ರಹ

Update: 2026-08-18 07:16 IST

Photo: x.com/prakashraaj

ಬೆಂಗಳೂರು : ಕರ್ನಾಟಕದಲ್ಲಿ 1.09 ಕೋಟಿ ಮತದಾರರನ್ನು ASDDO ಪಟ್ಟಿಗೆ ಸೇರಿಸಿರುವುದು ಆತಂಕಕ್ಕೆ ಕಾರಣವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಮತದಾರರ ಹೆಸರುಗಳು ರದ್ದುಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಮತ್ತು ಮತದಾರರಿಗೆ ಆಗುತ್ತಿರುವ ಘೋರ ಅನ್ಯಾಯವನ್ನು ತಡೆಯಬೇಕು ಎಂದು ಪ್ರಕಾಶ್ ರಾಜ್ ಹಾಗೂ ಹಲವು ನಾಗರಿಕ ಸಂಘಟನೆಗಳು ಆಗ್ರಹಿಸಿದ್ದಾರೆ.

ಈ ಪತ್ರಕ್ಕೆ ಎದ್ದೇಳು ಕರ್ನಾಟಕ, ಮುಸ್ಲಿಂ ಮುತ್ತಹಾದೆ ಮಹಾಝ್, ಆಶೀರ್ವಾದ್, ನಮ್ಮ ಮತ ನಮ್ಮ ಹಕ್ಕು ವೇದಿಕೆ ಹಾಗೂ ನಾಗರಿಕ ಮತ ಕಾವಲು ಸಮಿತಿಯ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುರ್ತು ಪತ್ರ ಬರೆದಿರುವ ಸಂಘಟನೆಗಳು, ಅರ್ಹ ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಅಗತ್ಯವಿದ್ದರೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಮನವಿ ಮಾಡಿವೆ.

“ಬೆಂಗಳೂರಿನ ಸುಮಾರು ಅರ್ಧದಷ್ಟು ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಡುವ ಅಪಾಯವಿದೆ. ಸುಮಾರು 3,000 ಮತಗಟ್ಟೆಗಳಲ್ಲಿ ಪ್ರಸ್ತಾಪಿತ ಹೆಸರು ತೆಗೆದುಹಾಕುವ ಪ್ರಮಾಣ ಶೇಕಡಾ 60ಕ್ಕಿಂತ ಹೆಚ್ಚಿದೆ” ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಎನ್ಯೂಮರೇಶನ್ ನಮೂನೆ ಸಲ್ಲಿಸುವ ಪ್ರಕ್ರಿಯೆಗೆ ಇನ್ನೂ ಮೂರು ತಿಂಗಳ ಕಾಲಾವಕಾಶ ವಿಸ್ತರಿಸುವಂತೆ ಕೇಂದ್ರ ಚುನಾವಣಾ ಆಯೋಗವನ್ನು ರಾಜ್ಯ ಸರ್ಕಾರ ಕೋರಬೇಕು. ಅಲ್ಲದೆ, ಈ ಪರಿಷ್ಕರಣಾ ಪ್ರಕ್ರಿಯೆಯನ್ನು ಒಂದು ವರ್ಷದ ಅವಧಿಯಲ್ಲಿ ವ್ಯವಸ್ಥಿತವಾಗಿ ನಡೆಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

“ಸ್ಥಳಾಂತರಗೊಂಡವರು, ಗೈರುಹಾಜರಾದವರು ಹಾಗೂ ಇತರರು ಎಂದು ವರ್ಗೀಕರಿಸಲಾದ ಮತದಾರರ ಮನೆಗಳಿಗೆ ತೆರಳಿ ಮರುಪರಿಶೀಲನೆ ನಡೆಸಬೇಕು. ವಿಳಾಸ ಬದಲಾಯಿಸಿರುವ ಮತದಾರರಿಗೆ ಫಾರ್ಮ್ 8 ವಿತರಿಸಬೇಕು. ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೆರವಾಗಲು ರಾಜ್ಯಾದ್ಯಂತ ಮತದಾರರ ಜಾಗೃತಿ ಅಭಿಯಾನ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕು” ಎಂದು ಸಂಘಟನೆಗಳು ಒತ್ತಾಯಿಸಿವೆ.

ಒಂದು ವೇಳೆ ಚುನಾವಣಾ ಆಯೋಗವು ತಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ, ಕರ್ನಾಟಕ ಸರ್ಕಾರ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಅಂಗೀಕರಿಸಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News