ಮತಗಳ್ಳತನ ಪ್ರಕರಣ | ಕೇಂದ್ರ, ರಾಜ್ಯ ಚುನಾವಣಾ ಆಯೋಗಗಳೆರಡೂ ಶುದ್ದ ಸುಳ್ಳು ಹೇಳಿವೆ : ಪ್ರಿಯಾಂಕ್ ಖರ್ಗೆ
"ರಾಹುಲ್ ಗಾಂಧಿಯವರು ಪ್ರಶ್ನೆ ಮಾಡಿರುವುದು ಆಯೋಗಕ್ಕೆ, ಉತ್ತರ ನೀಡಲು ಮುಂದಾಗುತ್ತಿರುವುದು ಬಿಜೆಪಿ"
ಬೆಂಗಳೂರು, ಸೆ.19: ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಮತಗಳ್ಳತನದ ಮಾಹಿತಿ ನೀಡಲು ಹೆದರುತ್ತಿರುವ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳೆರಡೂ ಶುದ್ದ ಸುಳ್ಳು ಹೇಳಿವೆ. ಪ್ರಕರಣದ ಎಲ್ಲಾ ವಿಚಾರಗಳ ಬಗ್ಗೆ ಆಯೋಗಗಳು ಸ್ಪಷ್ಟೀಕರಣ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ನಂತರ ಚುನಾವಣಾ ಆಯೋಗವು ಮತಗಳ್ಳತನವನ್ನು ನಾವೇ ಕಂಡುಹಿಡಿದು ತಡೆದಿದ್ದೇವೆ ಎನ್ನುವಂತೆ ಮಾತನಾಡುತ್ತಿದ್ದಾರೆ. ಮತದಾರರನ್ನು ಮತಪಟ್ಟಿಯಿಂದ ಕೈ ಬಿಡುವ ಪ್ರಕ್ರಿಯೆಯನ್ನು ನಾವೇ ನಿಲ್ಲಿಸಿದ್ದು ಎಂದು ಹೇಳುತ್ತಿದ್ದಾರೆ. ಇದು ಶುದ್ದ ಸುಳ್ಳು ಎಂದರು.
2023ರ ಫೆ.11ರಂದು ಕಲಬುರಗಿಯಲ್ಲಿ ನಾವು ಮತ್ತು ಬಿ.ಆರ್.ಪಾಟೀಲರು ಸೇರಿ ಮಾಧ್ಯಮಗೋಷ್ಠಿ ನಡೆಸಿ 6,670 ನಕಲಿ ಅರ್ಜಿಗಳು ಆನ್‍ಲೈನ್ ಮೂಲಕ ಮತಪಟ್ಟಿಯಿಂದ ಹೆಸರು ಕೈ ಬಿಡುವಂತೆ ಬಂದಿವೆ ಎಂದು ಹೇಳಿದ್ದನ್ನು ಬಹಿರಂಗಗೊಳಿಸಿದ್ದೆವು. ಮತಪಟ್ಟಿಯಿಂದ ಹೇಗೆ ಹೆಸರನ್ನು ಕೈ ಬಿಡುವ ಬಗ್ಗೆ 20.02.2023ರಲ್ಲಿ ದಿಲ್ಲಿಯ ಮುಖ್ಯಚುನಾವಣಾಧಿಕಾರಿಯವರಿಗೆ ನನ್ನ ಲೆಟರ್ ಹೆಡ್ ಮೂಲಕ ಪತ್ರ ಬರೆದು ದೂರು ಸಲ್ಲಿಸಲಾಯಿತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಅಂದಿನ ಕಲಬುರಗಿ ಎ.ಸಿ ಮಮತಾ ಅವರು ನಾವೆಲ್ಲರೂ ಹೋರಾಟ ಮಾಡುತ್ತೇವೆ ಎಂದು ಹೇಳಿದ ಮೇಲೆ 21.02.2023ರಂದು ಎಫ್‍ಐಆರ್ ದಾಖಲಿಸುತ್ತಾರೆ. ಈ ಪ್ರತಿಯಲ್ಲಿ ಆಳಂದ ಕ್ಷೇತ್ರದ 6,670 ಮತದಾರರನ್ನು ಅನಧಿಕೃತವಾಗಿ ಕೈ ಬಿಟ್ಟಿರುವ ಬಗ್ಗೆ ಬಿ.ಆರ್.ಪಾಟೀಲ್ ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಪ್ರಾಥಮಿಕ ತನಿಖೆಯ ನಂತರ ಬಿ.ಆರ್.ಪಾಟೀಲ್ ಅವರ ಹೇಳಿಕೆ ನಿಜ ಎಂದು ರಿಟರ್ನಿಂಗ್ ಅಧಿಕಾರಿಯೊಬ್ಬರು ಹೇಳುತ್ತಾರೆ. 6,180 ವ್ಯಕ್ತಿಗಳಲ್ಲಿ ಕೇವಲ 24 ಮಾತ್ರ ಪ್ರಾಮಾಣಿಕವಾಗಿದ್ದು 5994 ಮತಗಳಲ್ಲಿ ಯಾರೂ ಸಹ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಹೇಳಲಾಗಿದೆ. ಇದು ಹೇಗಾಯಿತು ತಿಳಿಯಲಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಮತದಾರರನ್ನು, ಬಿಎಲ್‍ಒಗಳನ್ನು ಇದರ ಬಗ್ಗೆ ವಿಚಾರಿಸಿದಾಗ ಇದು ಹೇಗಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ತಂತ್ರಜ್ಞಾನದ ಮೂಲಕ ಈ ಗೋಲ್‍ಮಾಲ್ ಪರಿಶೀಲನೆ ಮಾಡಿದಾಗ ಅರ್ಜಿ ಅಲ್ಲಿಸಿದ ಮೊಬೈಲ್ ನಂಬರ್‍ಗಳು ಉತ್ತರ ಪ್ರದೇಶ, ಬಿಹಾರ, ಒಡಿಶಾ ಮೂಲದವು. ಇದರ ಬಗ್ಗೆ ಹೆಚ್ಚು ತನಿಖೆ ನಡೆಸಬೇಕಾಗಿದೆ. ಓಟಿಪಿ, ಐಪಿ ಅಡ್ರೆಸ್ ಸೇರಿದಂತೆ ಇತರ ತಾಂತ್ರಿಕ ಅಂಶಗಳನ್ನು ನೀಡಿದರೆ ತನಿಖೆ ಮುಂದುವರೆಸಬಹುದು ಎಂದು ಅಧಿಕಾರಿ ಹೇಳುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
01.02.2025ರಂದು ಸೈಬರ್ ಕ್ರೈಂ ಡಿವಿಜನ್ ಅವರು ಮುಖ್ಯ ಚುನಾವಣಾಧಿಕಾರಿಗಳಿಗೆ ಹಿಂದಿನ 18 ತಿಂಗಳಲ್ಲಿ 18 ಪತ್ರಗಳನ್ನು ಬರೆದರೂ ಒಂದಕ್ಕೂ ಸಹ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಜೊತೆಗೆ ಓಟಿಪಿ, ಮೊಬೈಲ್ ನಂಬರ್, ಲಾಗಿನ್ ಮಾಹಿತಿ, ಐಪಿ ವಿಳಾಸ, ಡಿವೈಸ್ ಐಡಿ ಸೇರಿದಂತೆ ತಾಂತ್ರಿಕ ವಿವರಗಳನ್ನು ನೀಡಿ ಎಂದರೆ ಅದಕ್ಕೂ ಉತ್ತರ ನೀಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
04.02.2025ರಂದು ಮುಖ್ಯ ಚುನಾವಣಾಧಿಕಾರಿ ಅವರು ಚುನಾವಣಾ ಆಯೋಗದ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಪತ್ರ ಬರೆದು 29.03.2023 ರಿಂದ 19.01.2025 ರವರೆಗೆ ಬರೆದಿರುವ ಪತ್ರಗಳ ಉಲ್ಲೇಖ ಮಾಡುತ್ತಾರೆ. ಚುನಾವಣಾ ಆಯೋಗ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ ಮೇಲೆಯೂ ಕರ್ನಾಟಕದ ಚುನಾವಣಾ ಆಯೋಗ ಏಕೆ ಪತ್ರಗಳನ್ನು ಬರೆದಿದೆ. ಆಯೋಗ ಹಸಿ ಸುಳ್ಳು ಹೇಳುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬಿ.ಆರ್.ಪಾಟೀಲ್ ಅವರು 2023ರಲ್ಲಿ ಈ ವಿಚಾರವನ್ನು ಹೊರಗೆಡವಿದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಬಿಜೆಪಿ ಸರಕಾರ. ಬಿಜೆಪಿ ನೇಮಕ ಮಾಡಿದ್ದ ಅಧಿಕಾರಿಗಳೇ ಈ ಎಲ್ಲಾ ಪತ್ರ ಬರೆದಿದ್ದಾರೆ. ಮಾಹಿತಿ ನೀಡಲು ಏಕೆ ಚುನಾವಣಾ ಆಯೋಗ ಹೆದರುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಆಯೋಗಕ್ಕೆ ಪ್ರಶ್ನಿಸಿದರೆ ಉತ್ತರಿಸುವುದು ಬಿಜೆಪಿ: ಚುನಾವಣಾ ಆಯೋಗಕ್ಕೆ ಸಾಮಾನ್ಯ ಪ್ರಜ್ಞೆ ಇಲ್ಲ. ಏಕೆಂದರೆ, ರಾಹುಲ್ ಗಾಂಧಿ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಆನ್‍ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳದೇ ಇದ್ದರೂ ಸುಮ್ಮನೆ ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಹೇಳಿದ್ದು ಫಾರ್ಮ್ ನಂ-7 ದುರುಪಯೋಗವಾಗುತ್ತಿದೆ ಎಂದು ಮಾತ್ರ. 6.09.2023ಕ್ಕೆ ಎಲ್ಲ ದಾಖಲೆಗಳನ್ನು ನೀಡಲಾಗಿದೆ ಎಂದು ಆಯೋಗ ಹೇಳುತ್ತಿದೆ. ಆದರೂ 15ಕ್ಕೂ ಹೆಚ್ಚು ಪತ್ರಗಳನ್ನು ಬರೆದಿರುವುದು ಏತಕ್ಕೆ? ರಾಹುಲ್ ಗಾಂಧಿ ಪ್ರಶ್ನೆ ಮಾಡಿರುವುದು ಚುನಾವಣಾ ಆಯೋಗಕ್ಕೆ. ಆದರೆ ಉತ್ತರ ನೀಡಲು ಮುಂದಾಗುತ್ತಿರುವುದು ಬಿಜೆಪಿ’ ಎಂದು ಕಿಡಿಕಾರಿದರು.