2032ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕ ಲಕ್ಷ್ಯ ಸಾಧಿಸುವ ಗುರಿ : ಪ್ರಿಯಾಂಕ್ ಖರ್ಗೆ
‘ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ’
ಬೆಂಗಳೂರು, ಅ.8: ರಾಜ್ಯ ಸರಕಾರವು ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025-32ಕ್ಕೆ ಅನುಮೋದನೆ ನೀಡಿದ್ದು, ಇದು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ನಿಪುಣ' ದೃಷ್ಟಿಕೋನಕ್ಕೆ ಪೂರಕವಾಗಿ, ಅತಿದೊಡ್ಡ ಕೌಶಲ್ಯ, ಉನ್ನತೀಕರಣ ಮತ್ತು ಮರುಕೌಶಲ್ಯ ಯೋಜನೆಯಾಗಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಳು ವರ್ಷಗಳ ಮಾರ್ಗಸೂಚಿ ಮತ್ತು 4,432.5 ಕೋಟಿ ರೂ. ವೆಚ್ಚದೊಂದಿಗೆ, ಈ ನೀತಿಯು ಕರ್ನಾಟಕವನ್ನು ಕೌಶಲ್ಯಪೂರ್ಣ ಕಾರ್ಯಪಡೆಯ ಪ್ರಮುಖ ಕೇಂದ್ರವನ್ನಾಗಿ ಮಾಡುವುದು ಹಾಗೂ 2032ರ ವೇಳೆಗೆ ರಾಜ್ಯದ 1 ಟ್ರಿಲಿಯನ್ ಡಾಲರ್ ಆರ್ಥಿಕ ಲಕ್ಷ್ಯವನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕವು ಭಾರತದ ತಂತ್ರಜ್ಞಾನ ಮತ್ತು ಹೂಡಿಕೆ ರಾಜಧಾನಿ ಮಾತ್ರವಲ್ಲ, ಇದು ಕೌಶಲ್ಯ ಮತ್ತು ಜ್ಞಾನ ರಾಜಧಾನಿಯೂ ಆಗಿದೆ ಹಾಗೂ ನಮ್ಮ ಜನರನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸುವ ಮೂಲಕ ಈ ನಾಯಕತ್ವವನ್ನು ಮುಂದುವರೆಸಲು ನಾವು ಉದ್ದೇಶಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬದಲಾಗುತ್ತಿರುವ ತಂತ್ರಜ್ಞಾನಗಳು ಮತ್ತು ಉದ್ಯಮದ ಅಗತ್ಯತೆಗಳನ್ನು ಈ ನೀತಿಯು ಪರಿಹರಿಸುತ್ತದೆ, ಕ್ರೆಡಿಟ್ ಆಧಾರಿತ ಕಾರ್ಯಕ್ರಮಗಳ ಮೂಲಕ ಶಾಲೆಗಳು, ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಸಂಯೋಜಿಸುತ್ತದೆ ಹಾಗೂ ಅಪ್ರೆಂಟಿಸ್‍ಶಿಪ್‍ಗಳು ಮತ್ತು ತರಬೇತಿಯ ಮೂಲಕ ಉದ್ಯಮ ಸಹಯೋಗವನ್ನು ಬಲಪಡಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಕರ್ನಾಟಕದ ಪ್ರತಿಯೊಬ್ಬ ಯುವಜನರು ನಾಳಿನ ಆರ್ಥಿಕತೆಗೆ, ಉದ್ಯೋಗಕ್ಕೆ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು, ಕೈಗಾರಿಕೆ ಮತ್ತು ಖಾಸಗಿ ಕ್ಷೇತ್ರಗಳು ಸೇರಿದಂತೆ ಸಕ್ರಿಯ ಭಾಗವಹಿಸುವಿಕೆಯ ಜೊತೆ, ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಕೆಕೆಆರ್‍ಡಿಬಿ ಸೇರಿದಂತೆ ಇತರೆ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಮುನ್ನೆಡಸಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.