ಶಿವಮೊಗ್ಗ ಕೃಷಿ ವಿವಿಗೆ ಅಕ್ರಮ ನೇಮಕಾತಿ ಖಂಡಿಸಿ ನ.4ಕ್ಕೆ ಪ್ರತಿಭಟನೆ
ಬೆಂಗಳೂರು: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದಾಗಿ ಸಾಬೀತಾದರೂ, ವಿವಿಯು ನೇಮಕಾತಿಯನ್ನು ರದ್ದುಪಡಿಸಿಲ್ಲ. ಇದನ್ನು ಖಂಡಿಸಿ ನ.4ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಾ.ಎಂ. ವೆಂಕಟಸ್ವಾಮಿ ಮಾತನಾಡಿ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿ ಮೀಸಲಾತಿ ರೋಸ್ಟರನ್ನು ಕಾನೂನುಬದ್ದವಾಗಿ ಪಾಲನೆ ಮಾಡಿಲ್ಲ ಎಂದು ಸರಕಾರಕ್ಕೆ ಹೈಕೋರ್ಟ್‌ಗೆ ಅಫಿಡವಿಟ್ ಅನ್ನು ಸಲ್ಲಿಕೆ ಮಾಡಿದೆ. ಆದರೂ, ವಿವಿಯು ಅಧಿಸೂಚನೆ ಹಿಂಪಡೆಯುತ್ತಿಲ್ಲ ಎಂದರು.
2015ರಲ್ಲಿ ವಿವಿಯು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ವಿಷಯವಾರು ಮೀಸಲಾತಿಯನ್ನು ಅನುಸರಿಸಲಾಗಿತ್ತು. ಆದರೆ ವಿವಿಯು ಈ ನ್ಯಾಯಯುತವಾದ ಅಧಿಸೂಚನೆಯನ್ನು ಹಿಂಪಡೆದು, ಪರಿಶಿಷ್ಟ ಸಮುದಾಯಗಳ ಅಭ್ಯರ್ಥಿಗಳಿಗೆ ವಂಚಿವ ಸಂಚನ್ನು ರೂಪಿಸಿ 2019ರಲ್ಲಿ ಹೊಸ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯಲ್ಲಿ ಸರಕಾರದ ಆದೇಶದಂತೆ ವಿಷಯವಾರು ಮೀಸಲಾತಿಯನ್ನೇ ಅನುಸರಿಸಿಲ್ಲ ಎಂದು ಅವರು ತಿಳಿಸಿದರು.
ಪರಿಶಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮೀಸಲಾತಿಯನ್ನು ಅನುಸರಿಸಲಿಲ್ಲ. ಹಾಗಾಗಿ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳು ಸಭೆಯನ್ನು ನಡೆಸಿ, ಹೈಕೋರ್ಟ್‌ಗೆ ಅಫಿಡೆವಿಟ್ ಅನ್ನು ಸಲ್ಲಿಸಿದ್ದಾರೆ. ಆದರೂ ನೇಮಕಾತಿಯ ರೂವಾರಿ ಮತ್ತು ದಲಿತ ವಿರೋಧಿ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧಿಸೂಚನೆಯನ್ನು ರದ್ದು ಮಾಡದೆ, ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನೇಮಕಾತಿ ಅಧಿಸೂಚನೆಯನ್ನು ರದ್ದು ಮಾಡಬೇಕು. ಹಾಗೆಯೇ ಕುಲಪತಿ ಡಾ.ಆರ್.ಸಿ.ಜಗದೀಶ್, ಕುಲಸಚಿವ ಡಾ.ಕೆ.ಸಿ.ಶುಧ ಮತ್ತು ಆಡಳಿತ ಮಂಡಳಿ ಸದಸ್ಯರನ್ನು 1989ರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ತಕ್ಕಷಣವೇ ಬಂದಿಸಬೇಕು. ನ್ಯಾಯಲಯದ ತೀರ್ಪು ಬರುವವರೆಗೂ ಅವರನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ನಟ ಚೇತನ್ ಅಹಿಂಸ, ವಕೀಲ ಹರಿರಾಮ್, ಬಿ.ಆರ್. ಭಾಸ್ಕರ್ ಪ್ರಸಾದ್, ಪತ್ರಕರ್ತ ಹರ್ಷಕುಮಾರ್ ಕುಗೈ, ಲೋಕೇಶ್ ರಾಮ್, ಡಾ.ಪ್ರವೀಣ್ ಎಚ್.ಜಿ, ರಾಹುಲ್ ಸಿಆರ್., ಅಜಿತ್ ಎಂ., ರಮೇಶ್ ಮತ್ತಿತರರು ಉಪಸ್ಥಿತರಿದ್ದರು.