×
Ad

ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್

Update: 2023-12-04 19:52 IST

ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಳಗಾವಿ(ಸುವರ್ಣ ವಿಧಾನಸೌಧ): ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆ ಪರೀಕ್ಷಾರ್ಥಿಗಳಿಗೆ ರಾಜ್ಯ ಸರಕಾರ ಸಿಹಿ ಸುದಿ ನೀಡಿದ್ದು, ಈ ಹಿಂದೆ ಡಿ.23ಕ್ಕೆ ನಿಗದಿಯಾಗಿದ್ದ ಮರು ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಿದೆ.

ಸೋಮವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ ವಿಷಯಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಮಾಡಿದ ಆಗ್ರಹಕ್ಕೆ ಮಣಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮರು ಪರೀಕ್ಷೆಯನ್ನು ಡಿ.23ರ ಬದಲು ಮುಂದಿನ ಸಾಲಿನ ಜನವರಿ 23ಕ್ಕೆ ನಡೆಸುವುದಾಗಿ ಘೋಷಿಸಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಬಸನಗೌಡ ಪಾಟೀಲ್ ಯತ್ನಾಳ್, 545 ಪಿಎಸೈ ಹುದ್ದೆ ಭರ್ತಿ ಮಾಡುವ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆ ನಡೆಸುವ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಈ ಹಿಂದೆ 54,103 ಜನ ಪಿಎಸ್ಸೈ ಪರೀಕ್ಷೆ ಬರೆದಿದ್ದರು. ಈಗ ದಿಢೀರ್ ಆಗಿ ಸರಕಾರ ಡಿ.23ರಂದು ಪರೀಕ್ಷೆ ನಿಗದಿ ಮಾಡಿದೆ ಎಂದರು.

ಪರೀಕ್ಷಾರ್ಥಿಗಳು ಇನ್ನೂ ಪೂರ್ವಭಾವಿ ತಯಾರಿ ಮಾಡಿಕೊಂಡಿಲ್ಲ. ರಾಜ್ಯ ಸರಕಾರ ಕನಿಷ್ಠ 3 ರಿಂದ 6 ತಿಂಗಳು ಕಾಲಾವಕಾಶ ಕೊಟ್ಟರೆ ಅವರಿಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪಿಎಸ್ಸೈ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ, ಯಾರು ಯಾರು ಶಾಮೀಲಾಗಿದ್ದಾರೆ ಅವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಬಂಧ ಉತ್ತರಿಸಿದ ಡಾ.ಜಿ.ಪರಮೇಶ್ವರ್, ಹಿಂದಿನ ಸರಕಾರ 2021ರಲ್ಲಿ 545 ಪಿಎಸ್ಸೈಗಳ ನೇಮಕ ಮಾಡಿಕೊಳ್ಳಲು ಆದೇಶ ಮಾಡಿ, ಪರೀಕ್ಷೆ ನಡೆಸಲಾಯಿತು. ಆನಂತರ ಇದರಲ್ಲಿ ಅಕ್ರಮ ನಡೆದಿರುವುದು ಬಯಲಾಯಿತು.  2022ರ ಎ.21ರಂದು ಮರು ಪರೀಕ್ಷೆ ನಡೆಸಲು ಮುಂದಾದಾಗ ಕೆಲವರು ನ್ಯಾಯಾಲಯದ ಮೊರೆ ಹೊದರು. ಪ್ರಸಕ್ತ ಸಾಲಿನ ನ.10ರಂದು ಮರು ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ ನೀಡಿದೆ ಎಂದರು.

ಆದರಂತೆ, ರಾಜ್ಯ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ಮಾಡಿ ಡಿ.23ರಂದು ಮರು ಪರೀಕ್ಷೆ ನಡೆಸಲು ತೀರ್ಮಾನ ಮಾಡಿದ್ದೆವು. ಇದರ ಜೊತೆಗೆ ಇನ್ನೂ 403 ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕ ಸಂಬಂಧ ಭೌತಿಕ ಪರೀಕ್ಷೆ ಆಗಿದೆ. ಸುಮಾರು 56 ಜನ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಹಿಂದಿನ 545 ಹುದ್ದೆಗಳ ಪ್ರಕರಣ ಇತ್ಯರ್ಥ ಆಗದೆ, ಹೊಸ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದರು.

ಇದಾದ ಬಳಿಕ ಇನ್ನೂ 600 ಜನ ಸಬ್ ಇನ್ಸ್‍ಪೆಕ್ಟರ್‍ಗಳನ್ನು ನೇಮಕಾತಿ ಮಾಡಬೇಕು. ಸುಮಾರು ಒಂದು ಸಾವಿರ ಸಬ್ ಇನ್ಸ್‍ಪೆಕ್ಟರ್‍ಗಳ ಹುದ್ದೆಗಳು ಖಾಲಿಯಿವೆ. ಆದುದರಿಂದ, 450 ಜನ ಎಎಸ್ಸೈ ಗಳನ್ನು ಹೆಚ್ಚುವರಿ ಹೊಣೆಗಾರಿಕೆ ನೀಡಿದ್ದೇವೆ. ಮೂರು ತಿಂಗಳಲ್ಲಿ 1500 ಜನ ಪೊಲೀಸರನ್ನು ನೇಮಕಾತಿ ಮಾಡಬೇಕಿದೆ. ಶೆಡ್ಯೂಲ್ ಘೋಷಣೆ ಮಾಡಿ ಆಗಿದೆ. ಈಗಾಗಲೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ಪರಮೇಶ್ವರ್ ಹೇಳುತ್ತಿದ್ದಂತೆ, ಸದನದಲ್ಲಿ ಗದ್ದಲ ಏರ್ಪಟ್ಟಿತ್ತು.

ಈ ವೇಳೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅವಧಿ ವಿಸ್ತರಣೆಗೆ ಸರಕಾರದ ಮೇಲೆ ಒತ್ತಡ ಹೇರಿದರು. ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಂದು ತಿಂಗಳು ಪರೀಕ್ಷೆ ಮುಂದೂಡಿರುವುದಾಗಿ ಘೋಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News