ಹೃದಯಾಘಾತಕ್ಕೆ ‘ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆ’; ಯಾವೆಲ್ಲಾ ಚಿಕಿತ್ಸೆ, ಎಲ್ಲೆಲ್ಲಿ ಲಭ್ಯ? ಇಲ್ಲಿದೆ ಮಾಹಿತಿ
ಬೆಂಗಳೂರು, ಅ.31: ಹೃದಯಾಘಾತ ಸಂದರ್ಭಗಳಲ್ಲಿ ಜೀವಗಳನ್ನ ಉಳಿಸಬೇಕು ಹಾಗೂ ಮತ್ತೆ ಸುವರ್ಣ ಸಮಯ(ಗೋಲ್ಡನ್ ಅವರ್)ದೊಳಗೆ, ಸಕಾಲಕ್ಕೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ‘ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ’ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.
ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇತ್ತಿಚೆಗೆ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಈಡಾಗುವವರಲ್ಲಿ ಶೇ.35ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಕಾರಿ ಸಂಗತಿ ಎಂದರು.
ಹಬ್ ಅಂಡ್ ಸ್ಪೋಕ್ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸುವ ಮೂಲಕ ಈ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್ ಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ʼಎದೆನೋವು ಕಾಣಿಸಿಕೊಂಡವರು ನಮ್ಮ ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ತಕ್ಷಣ ಇಸಿಜಿ ಮಾಡಲಾಗುತ್ತದೆ. ಜೊತೆಗೆ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿಯ ಕುರಿತು ಸ್ಥಳದಲ್ಲೆ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತೆ. ಟ್ರಿಕಾಗ್ ಸಂಸ್ಥೆಯವರ ಎಐ ತಂತ್ರಜ್ಞಾನದ ಸಹಾಯ ಪಡೆದು ಅವರ ಸ್ಥಿತಿಯನ್ನು ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ. ಗಂಭೀರ ಪರಿಸ್ಥಿತಿಯಲ್ಲಿರುವವರಿಗೆ ಸ್ಪೋಕ್ ಕೇಂದ್ರಗಳಲ್ಲೆ(ತಾಲೂಕು ಆಸ್ಪತ್ರೆ) ‘ಟೆನೆಕ್ಟೆಪ್ಲಸ್’ ಚುಚ್ಚುಮದ್ದು ಕೊಡಲಾಗುತ್ತದೆʼ ಎಂದು ಅವರು ಹೇಳಿದರು.
ʼಈ ಚುಚ್ಚುಮದ್ದು ಹಠಾತ್ ಹೃದಯಾಘಾತ ಆಗುವುದನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಗಂಭೀರ ಪರಿಸ್ಥಿತಿಯಲ್ಲಿರುವವರಿಗೆ ತಕ್ಷಣಕ್ಕೆ, ಹೃದಯಾಘಾತ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ಈ ಚುಚ್ಚು ಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ರೂ.ಪಡೆಯಲಾಗುತ್ತದೆ. ನಮ್ಮ ಸರಕಾರಿ ಆಸ್ಪತ್ರೆಗಳಲ್ಲಿ ಇದನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆʼ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ʼತಾಲೂಕು ಅಥವಾ ಜಿಲ್ಲಾಸ್ಪತ್ರೆಯ ಸ್ಪೋಕ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಸೂಪರ್ ಸ್ಪಾಷಾಲಿಟಿ ಆಸ್ಪತ್ರೆಯ ಹಬ್ ಕೇಂದ್ರಗಳಿಗೆ ಆಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಡಲಾಗುವುದು. ಅಲ್ಲಿ ರೋಗಿಗಳಿಗೆ ಆಂಜಿಯೋಗ್ರಾಮ್ ಅಥವಾ ಆಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನ ಈ ಹಬ್ ಕೇಂದ್ರಗಳಲ್ಲಿ ಪಡೆಯಬಹುದುʼ ಎಂದು ಅವರು ಹೇಳಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಹಬ್ ಕೇಂದ್ರಗಳಲ್ಲೂ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕಾರ್ಡುದಾರರಿಗೆ 1.50 ಲಕ್ಷ ರೂ.ಗಳವರೆಗೆ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಜಯದೇವ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೂರು ಹಬ್ ಗಳ ವ್ಯಾಪ್ತಿಗೆ 45 ಸ್ಪೋಕ್ ಕೇಂದ್ರಗಳನ್ನ ಸಂಪರ್ಕಿಸಲಾಗಿದೆ. ಇವುಗಳಲ್ಲಿ 35 ತಾಲೂಕು ಆಸ್ಪತ್ರೆಗಳು ಮತ್ತು 10 ಜಿಲ್ಲಾಸ್ಪತ್ರೆಗಳು ಸೇರಿವೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರದಲ್ಲಿ 13 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಒಳಗೊಂಡ 7 ಹಬ್ ಗಳನ್ನ ರಚಿಸಿದ್ದೇವೆ. ಇವುಗಳ ವ್ಯಾಪ್ತಿಗೆ, 40 ಸ್ಪೋಕ್ ಕೇಂದ್ರಗಳನ್ನು ಜೋಡಿಸಲಾಗಿದೆ. ಇದರಲ್ಲಿ 34 ತಾಲೂಕು ಮತ್ತು 6 ಜಿಲ್ಲಾಸ್ಪತ್ರೆಗಳು ಸೇರಿವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ವಿಧಾನಸೌಧ, ನ್ಯಾಯಾಲಯ ಸೇರಿದಂತೆ 50 ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಡಿಫಿಬ್ರಿಲೇಟರ್(ಎಇಡಿ)ಗಳನ್ನು ಅಳವಡಿಸಲಾಗುವುದು. ಚುಚ್ಚುಮದ್ದು ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಒಂದು ಎಇಡಿ ಸಾಧನ ಖರೀದಿಗೆ ಅಂದಾಜು 1.10 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಒಟ್ಟಾರೆ ಈ ಯೋಜನೆಗಾಗಿ 6.50 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಎಲ್ಲಾ ವಯೋಮಾನದವರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲು ʻಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆʼಯನ್ನು ಜಾರಿಗೊಳಿಸಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 31, 2023
ಈ ಯೋಜನೆಯ ಮೂಲಕ, ರಾಜ್ಯದ 16… pic.twitter.com/kTwNFq4uyK