ಧರ್ಮಸ್ಥಳ | ದೂರುದಾರ ಅನಾಮಧೇಯ ವ್ಯಕ್ತಿ ಹಿಂದೆ ಕೇರಳ ಸರಕಾರ ಇದೆ : ಆರ್.ಅಶೋಕ್
ಮೈಸೂರು : ʼಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣದ ದೂರುದಾರ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರಕಾರ ಇದೆʼ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರಕಾರ ಇದೆ. ಯಾರೋ ಕಾಣದ ಕೈ ಇಲ್ಲಿ ಕೆಲಸ ಮಾಡುತ್ತಿದೆ. ಈ ಪ್ರಕರಣ ಜಟಿಲ ಆಗುತ್ತಿಲ್ಲ, ಜಟಿಲ ಮಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ ಪ್ರಕರಣದ ಬ್ಯಾಕ್ ಗ್ರೌಂಡ್ ಹಿಂದೆ ಇರೋದು ಕೇರಳ ಸರಕಾರ" ಎಂದು ಆರೋಪಿಸಿದರು.
ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ ಇದೆ. ಇಲ್ಲಿ ಆತ್ಮಹತ್ಯೆ ಆಗಿದೆಯೋ ಕೊಲೆ ಆಗಿದೆಯೋ ಪ್ರಕರಣವನ್ನು ಎಸ್‌ಐಟಿಗೆ ವರ್ಗಾವಣೆ ಮಾಡಿದ್ದಾರೆ. ನಾನು ಇದನ್ನು ಸ್ವಾಗತ ಮಾಡುತ್ತೇನೆ. ಧರ್ಮಸ್ಥಳದವರು ಕೂಡ ಇದನ್ನು ಸ್ವಾಗತ ಮಾಡಿದ್ದಾರೆ. ಈ ಪ್ರಗತಿ ಪರರ ಗುಂಪು ನಾಳೆ ಎಸ್‌ಐಟಿಯನ್ನು ಕೂಡ ಒಪ್ಪಲ್ಲ ಅಂತ ಅನ್ನಿಸುತ್ತಿದೆ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ. ಅವರ ಪರ ರಿಪೋರ್ಟ್ ಕೊಟ್ಟರೆ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ. ಈ ಕುರಿತು ಒಂದು ತಂಡ ಮುಂದೆ ಕಿತಾಪತಿ ಮಾಡಲೂಬಹುದು ಎಂದು ಹೇಳಿದರು.
ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ ಬುರುಡೆ ಬಿಡ್ತಾನೋ ಕಾದು ನೋಡೋಣ. ಈ ಧರ್ಮಸ್ಥಳದ ಸುದ್ದಿ ಕೇರಳದಲ್ಲಿ ಚರ್ಚೆ ಆಗುತ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರ ಬರುತ್ತೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.