×
Ad

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ : ರಣದೀಪ್ ಸಿಂಗ್ ಸುರ್ಜೇವಾಲ

Update: 2025-06-30 17:31 IST

 ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹ ಹಾಗೂ ನಿಮ್ಮ ಕಲ್ಪನೆಯಿಂದ ಕೂಡಿವೆ. ಅಂತಹ ಯಾವುದೆ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲದೇ, ಅವರೊಂದಿಗೆ ಸಮಾಲೋಚನೆ ನಡೆಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಪರಿಣಾಮದ ಕುರಿತು ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.

ಪಕ್ಷದ ಸಂಘಟನೆ ಅವರವರ ಕ್ಷೇತ್ರಗಳಲ್ಲಿ ಯಾವ ರೀತಿ ನಡೆಯುತ್ತಿದೆ. ಪಕ್ಷದ ಮುಂಚೂಣಿ ಘಟಕಗಳ ಕಾರ್ಯವೈಖರಿಯ ಬಗ್ಗೆಯೂ ಪರಾಮರ್ಶಿಸಲಾಗುವುದು. ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಯಾವ ಮಟ್ಟದಲ್ಲಿ ಆಗುತ್ತಿವೆ ಎಂಬ ಮಾಹಿತಿಯನ್ನು ಪಡೆಯುತ್ತೇನೆ. ಇದರಿಂದಾಗಿ, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮಾಹಿತಿ ನೀಡಲು ಅನುಕೂಲ ಆಗುತ್ತದೆ ಎಂದು ಸುರ್ಜೇವಾಲ ತಿಳಿಸಿದರು.

ಸರಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ಶಾಸಕರಿಂದ ಮಾಹಿತಿ ಪಡೆಯುತ್ತೇನೆ. ಇದಲ್ಲದೇ. ಸಂಸದರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ಕರೆಯಲಾಗುವುದು. ಪಕ್ಷ ಸಂಘಟನೆಯ ದೃಷ್ಟಿಯಲ್ಲಿ ಈ ರೀತಿಯ ಸಭೆಗಳು ನಡೆಸುವುದು ನಿರಂತರವಾದ ಪ್ರಕ್ರಿಯೆ ಎಂದು ಸುರ್ಜೇವಾಲ ಹೇಳಿದರು.

ಕರ್ನಾಟಕವು ಇಡೀ ದೇಶದಲ್ಲಿ ವರ್ಷಕ್ಕೆ 52 ಸಾವಿರ ಕೋಟಿ ರೂ.ಗಳನ್ನು ಜನರಿಗೆ ಅನುಕೂಲ ಕಲ್ಪಿಸಲು ಗ್ಯಾರಂಟಿಗಳಿಗಾಗಿ ಖರ್ಚು ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗಳಿಗೆ ವಾರ್ಷಿಕ ಸುಮಾರು 24 ಸಾವಿರ ಕೋಟಿ ರೂ.ಗಳನ್ನು ಹಾಕುತ್ತಿದ್ದೇವೆ. 4 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿಯನ್ನು ನೀಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಪರಿಹಾರ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಸುರ್ಜೇವಾಲ ಕರೆದಿರುವ ಸಭೆಗೆ ಆಗಮಿಸುವಂತೆ ನನಗೆ ಮಾಹಿತಿ ಬಂತು. ಆದರೆ, ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಭೆ ಮೊದಲೆ ನಿಗದಿಯಾಗಿತ್ತು. ಆದುದರಿಂದ, ಬೆಂಗಳೂರಿಗೆ ಹೋಗಲು ಸಾಧ್ಯವಾಗಿಲ್ಲ. ಮಂಗಳವಾರ ಬೆಳಗ್ಗೆ ಅವರನ್ನು ಭೇಟಿಯಾಗುತ್ತೇನೆ. ತಮ್ಮನ್ನು ಏಕೆ ಕರೆದಿದ್ದಾರೆ ಗೊತ್ತಿಲ್ಲ. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ನನ್ನ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸುತ್ತೇನೆ.

-ರಾಜು ಕಾಗೆ, ಹಿರಿಯ ಕಾಂಗ್ರೆಸ್ ಶಾಸಕ

‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿನಲ್ಲಿ ನಡೆಸುತ್ತಿರುವ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ಆದುದರಿಂದ, ನಾನು ಆ ಸಭೆಗೆ ಹೋಗುತ್ತಿಲ್ಲ. ಶಾಸಕರ ಸಮಸ್ಯೆಗಳು ಏನಿವೆ ಎಂಬುದನ್ನು ವರಿಷ್ಠರು ಕೇಳಬೇಕು. ಹಾಗಾಗಿ, ಅವರು ಸಭೆ ಮಾಡುತ್ತಿದ್ದಾರೆ. ಶಾಸಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ’

-ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ

10 ಜಿಲ್ಲೆಗಳ ಶಾಸಕರ ಸಭೆ?: ರಾಜ್ಯದ 10 ಜಿಲ್ಲೆಗಳ ಶಾಸಕರೊಂದಿಗೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಇರಲಿರುವ ಅವರು ಜಿಲ್ಲಾವಾರು ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ. ಆನಂತರ, ಶಾಸಕರಿಂದ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ವರದಿ ಸಲ್ಲಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News