×
Ad

‘ಬಿಡದಿ ಟೌನ್‍ಶಿಪ್ ಯೋಜನೆ’ ಕಾಂಗ್ರೆಸ್ ನಾಯಕರ ಲೂಟಿ ಯೋಜನೆ : ಆರ್.ಅಶೋಕ್

Update: 2025-05-16 20:24 IST

ಆರ್.ಅಶೋಕ್

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆ ಎಂಬುದು ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ. ಇದರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಾಡುತ್ತಿರುವ ಭೂಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದಾಗಿ ಬೆಂಗಳೂರಿಗೆ ಹಾನಿಯಾಗಲಿದೆ. ನಗರದ ಸುತ್ತಮುತ್ತಲಿನ ಜಮೀನುಗಳ ಬೆಲೆ ಹೆಚ್ಚಿಸಲು ಈ ರೀತಿ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭೂಸ್ವಾಧೀನ ಎನ್ನುವುದೇ ದೊಡ್ಡ ಮಾರಿ ಎಂದರು.

ಇದೀಗ ಎಚ್.ಡಿ.ಕುಮಾರಸ್ವಾಮಿ ಮೇಲೆ ಆರೋಪ ಮಾಡಲಾಗುತ್ತಿದೆ. ನಾನು ಕಂದಾಯ ಸಚಿವನಾಗಿದ್ದೆ. ಆಗ ಎಂದೂ ನಾನು ಭೂಸ್ವಾಧೀನ ಮಾಡಲು ಬರಲಿಲ್ಲ. ರೈತರು ಬೇಡ ಎಂದಾಗಲೇ ಸ್ವಾಧೀನ ಕೈ ಬಿಡಲಾಗಿತ್ತು. ಕಾಂಗ್ರೆಸ್ ಎಂದರೆ ರಿಯಲ್ ಎಸ್ಟೇಟ್ ಸರಕಾರ ಎಂದು ಅವರು ಟೀಕಿಸಿದರು.

ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಸರಕಾರ 2ಸಾವಿರ ರೂ. ನೀಡಿ ಮತ್ತೊಂದು ಕಡೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ಕಡೆ ಹಣ ನೀಡಿದರೆ ಮನೆಯ ಯಜಮಾನನಿಂದ ಸುಮಾರು 8ಸಾವಿರ ರೂ. ಲೂಟಿ ಮಾಡುತ್ತಿದ್ದಾರೆ. 3ಸಾವಿರ ಎಕರೆ ಜಮೀನನ್ನು ಕೊಳ್ಳೆ ಹೊಡೆಯಲು ಬಿಡದಿ ಟೌನ್‍ಶಿಪ್ ಯೋಜನೆಯಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸ್ವಾಧೀನ ಮಾಡಲಾಗುತ್ತದೆ. ದುಡ್ಡು ಮಾಡಲು ಈ ರೀತಿಯ ಯೋಜನೆ ತರಲಾಗಿದೆ ಎಂದರು.

ನೈಸ್ ರಸ್ತೆ ಪಕ್ಕದಲ್ಲೇ ಮತ್ತೊಂದು ನೈಸ್ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 20-30 ಸಾವಿರ ಎಕರೆ ಸ್ವಾಧೀನ ಮಾಡಲಾಗುತ್ತದೆ. ಇದರಿಂದಲೂ ಹಣ ಲೂಟಿ ಮಾಡುವ ಪ್ಲಾನ್ ಇದೆ ಎಂದು ಅಧಿಕಾರಿಗಳಿಂದಲೇ ನನಗೆ ತಿಳಿದುಬಂದಿದೆ. ಯಾವ ರೈತರು ಜಮೀನು ನೀಡುತ್ತಾರೋ ಅವರ ಮನೆ ಹಾಳಾಗಲಿದೆ. ಶೇ.95ರಷ್ಟು ರೈತರು ನಷ್ಟ ಹೊಂದಿ ಭಿಕ್ಷುಕರಾಗುತ್ತಾರೆ. ರೈತರ ಮಕ್ಕಳಿಗೆ ಭೂಮಿಯೇ ಇರುವುದಿಲ್ಲ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News