×
Ad

ರವಿಕುಮಾರ್ ಯಾವ ರೀತಿಯ ಅಶ್ಲೀಲ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ : ಆರ್.ಅಶೋಕ್

Update: 2025-07-05 18:08 IST

                                                                     ಆರ್.ಅಶೋಕ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಬಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ಸದಸ್ಯ ಎನ್.ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿ ವಿರುದ್ಧ ಸಿಎಂ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆದರೂ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಕಾರ್ಯ ನಡೆಯದೆ, ಶಾಸಕರು ದಂಗೆ ಏಳುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಸೂಚಿಸಿದೆ. ಈ ಸಮಸ್ಯೆಗಳನ್ನು ಮರೆಮಾಚಲು ರವಿಕುಮಾರ್ ಹೇಳಿಕೆಯನ್ನು ವಿವಾದ ಮಾಡಲಾಗಿದೆ. ಬಿಜೆಪಿಯವರು ಮಾಡಿದರೆ ಎಫ್‍ಐಆರ್ ದಾಖಲಿಸುತ್ತಾರೆ. ಕಾಂಗ್ರೆಸ್‍ನವರು ಮಾಡಿದರೆ ಯಾವುದೇ ದೂರು ದಾಖಲಾಗುವುದಿಲ್ಲ ಎಂದು ಅವರು ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲೇ ಕರೆಯುತ್ತಾರೆ. ರಾಷ್ಟ್ರಪತಿಗೆ ಗೌರವ ಕೊಡದೆ ಏಕವಚನದಲ್ಲೇ ಮಾತಾಡುತ್ತಾರೆ. ಅಂದರೆ ಕಾಂಗ್ರೆಸ್‍ಗೆ ಬೇರೆಯೇ ರೀತಿಯ ಕಾನೂನು ಇದೆ ಎಂದಾಯಿತು. ರವಿಕುಮಾರ್ ಯಾವ ರೀತಿಯ ಅಶ್ಲೀಲ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.

ಸರಣಿ ಹೃದಯಾಘಾತ ಪ್ರಕರಣ ಕಂಡುಬಂದರೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಕೋವಿಡ್ ಲಸಿಕೆಯಿಂದ ಹೀಗಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೋವಿಡ್ ಲಸಿಕೆಯನ್ನು ಇಡೀ ದೇಶದ ಜನರಿಗೆ ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಲಸಿಕೆ ಬಗ್ಗೆ ಆರೋಪ ಮಾಡಲಾಗುತ್ತಿದೆ ಎಂದು ಅವರು ದೂರಿದರು.

ಚಿಕ್ಕಮಗಳೂರು, ಕೊಡಗು, ಸಕಲೇಶಪುರದಲ್ಲಿ ಕಾಫಿ ಬೆಳೆ ಹಾನಿಯಾಗಿದ್ದರೂ, ತೋಟಗಾರಿಕೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ರೈತರನ್ನು ಭೇಟಿ ಮಾಡಿಲ್ಲ. ನಾನು ಹಾಸನಕ್ಕೆ ಭೇಟಿ ನೀಡಿ, ಹೃದಯಾಘಾತ ಹಾಗೂ ಕಾಫಿ ಬೆಳೆ ನಾಶದ ಬಗ್ಗೆ ವಿಚಾರಿಸುತ್ತೇನೆ. ಸರಕಾರವು ಈ ಕೆಲಸವನ್ನು ಕೂಡಲೇ ಮಾಡಬೇಕು. ಇನ್ನೂ ಯಾರು ಸಿಎಂ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆಯೇ ಹೊರತು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News