ಎಚ್.ಆರ್.ರಂಗನಾಥ್ / ಅರುಣ್ ಬಡಿಗೇರ್ (Photo credit: publictv.in)

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯು ಅನುಪಯುಕ್ತವಾಗಿದ್ದು, ದಾಳಿಗಳ ಮೂಲಕ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲಾಗುತ್ತಿದೆ ಎಂಬರ್ಥ ಬರುವ ಹೇಳಿಕೆಗಳನ್ನು ನೀಡಿರುವ ಆರೋಪ ಮೇಲೆ ಪಬ್ಲಿಕ್ ಟಿವಿಯ ಸಂಸ್ಥಾಪಕ ಹಾಗೂ ನಿರ್ದೇಶಕ ಎಚ್.ಆರ್.ರಂಗನಾಥ್ ಮತ್ತು ಸುದ್ದಿ ನಿರೂಪಕ ಅರುಣ್ ಬಡಿಗೇರ್ ಗೆ ನೋಟೀಸ್ ನೀಡಲಾಗಿದೆ.

ನ.30ರ ಮಧ್ಯಾಹ್ನ 3.30 ಗಂಟೆಗೆ ಲೋಕಾಯುಕ್ತರ ಮುಂದೆ ಖುದ್ದಾಗಿ ಹಾಜರಾಗಿ, ಕಾರ್ಯಕ್ರಮದಲ್ಲಿ ಮಾಡಿರುವ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ತಮ್ಮ ಸ್ಪಷ್ಟನೆ ಮತ್ತು ವಿವರಣೆಯನ್ನು ಸಲ್ಲಿಸಬೇಕು ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಇದೇ ನ.18ರ ರಾತ್ರಿ 9 ಗಂಟೆಗೆ ಪಬ್ಲಿಕ್ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬುಲೆಟಿನ್' ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಹಾಗೂ ದಾಳಿಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಘನತೆಗೆ ಧಕ್ಕೆ ತರುವಂತಹ ಮತ್ತು ಸಾರ್ವಜನಿಕರಲ್ಲಿ ಸಂಸ್ಥೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಸಾಧ್ಯತೆಯಿರುವ ಹೇಳಿಕೆಗಳನ್ನು ಪ್ರಸಾರ ಮಾಡಿರುವುದನ್ನು ಲೋಕಾಯುಕ್ತ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.

ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್ ಮತ್ತು ಅರುಣ್ ಬಡಿಗೇರ್ ಲೋಕಾಯುಕ್ತ ಸಂಸ್ಥೆಯನ್ನು ಟೀಕಿಸುವ ಭರದಲ್ಲಿ, ಸಂಸ್ಥೆಯು ಅನುಪಯುಕ್ತವಾಗಿದೆ. ಅದರ ಕಾರ್ಯಚಟುವಟಿಕೆಗಳಿಂದ ಯಾವುದೇ ಪರಿಣಾಮಕಾರಿ ಫಲಿತಾಂಶಗಳು ದೊರೆಯುತ್ತಿಲ್ಲ ಹಾಗೂ ದಾಳಿಗಳ ಮೂಲಕ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲಾಗುತ್ತಿದೆ ಎಂಬರ್ಥ ಬರುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಸಂಸ್ಥೆಯ ಕಾರ್ಯಕ್ಷಮತೆ, ಶಿಕ್ಷೆಯ ಪ್ರಮಾಣ ಹಾಗೂ ದಾಳಿಗಳ ನಂತರದ ಕ್ರಮಗಳ ಕುರಿತು ಆಧಾರರಹಿತ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಅಪಹಾಸ್ಯ ಮಾಡಿರುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಸಂಸ್ಥೆಯು ಆರೋಪಿಸಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಕಲಂ 17 ಹಾಗೂ 17-ಎಗಳಲ್ಲಿನ ಸಂಬಂಧಿತ ಕಾನೂನು ಅಂಶಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲು, ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್ ಮತ್ತು ಅರುಣ್ ಬಡಿಗೇರ್ ಅವರಿಂದ ವಿವರಣೆ ಪಡೆಯಲು ಉದ್ದೇಶಿಸಲಾಗಿದೆ. ಹೀಗಾಗಿ ನೋಟಿಸ್ ನೀಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor