ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ 

ಬೆಂಗಳೂರು: ಬೆಲೆ ಏರಿಕೆ ಮತ್ತು ರೈತರ ಸಂಕಷ್ಟದ ಕುರಿತು ನಿಮಗೆ ನಿಜವಾಗಿಯೂ ಕಾಳಜಿಯಿದ್ದರೆ, ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಷ್ಟೇ ತೀವ್ರತೆಯಿಂದ ಕೇಂದ್ರ ಸರಕಾರದ ಮುಂದೆಯೂ ಪ್ರಸ್ತಾಪಿಸಿ ಪರಿಹಾರಕ್ಕಾಗಿ ಒತ್ತಾಯಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತೈಲ ಬೆಲೆ ಏರಿಕೆ ಸೇರದಂತೆ ಆರು ಪ್ರಶ್ನೆಗಳನ್ನು ಕೇಂದ್ರ ಸರಕಾರಕ್ಕೆ ಕೇಳಿದ್ದಾರೆ.

ಸೋಮವಾರ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘2026ರ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಗರಿಷ್ಠ ಸಹಿಷ್ಣು ಮಿತಿಯನ್ನು ಮೀರಿರುವ ಸಂದರ್ಭದಲ್ಲಿ, ಚಿಲ್ಲರೆ ಹಣದುಬ್ಬರ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರದ ತಕ್ಷಣದ ಯಾವ ಕ್ರಮಗಳನ್ನು ಕೈಗೊಳ್ಳಲಿದೆ?. ಕಚ್ಚಾ ತೈಲದ ಬೆಲೆಯಲ್ಲಿ ಉಂಟಾಗುವ ಅನಿರೀಕ್ಷಿತ ಏರಿಳಿತಗಳು, ವಿದೇಶಿ ವಿನಿಮಯ ದರದ ಅಸ್ಥಿರತೆ ಹಾಗೂ ಅಂತಾರಾಷ್ಟ್ರೀಯ ಇಂಧನ ಪೂರೈಕೆಯಲ್ಲಿನ ಅಡಚಣೆಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸಲು ಕೇಂದ್ರ ಸರಕಾರ ಯಾವ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಈರುಳ್ಳಿ, ಬೇಳೆಕಾಳುಗಳು ಹಾಗೂ ಅಡುಗೆ ಎಣ್ಣೆಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಕಾರದ ಖರೀದಿ ವ್ಯವಸ್ಥೆ, ಮೀಸಲು ದಾಸ್ತಾನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕ್ರಮಗಳು ಹಾಗೂ ವ್ಯಾಪಾರ ನೀತಿಯ ಮಧ್ಯಪ್ರವೇಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಏಕೆ ಸಾಧ್ಯವಾಗಿಲ್ಲ?. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್‍ಗಳ ಸಂಖ್ಯೆಯನ್ನು ಕೇಂದ್ರ ಸರಕಾರ ಮತ್ತೆ ಹಿಂದಿನ ಮಟ್ಟಕ್ಕೆ ಹೆಚ್ಚಿಸಲಿದೆಯೇ? ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮೇಲಿನ ಅಡುಗೆ ಅನಿಲದ ಹೊರೆಯನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳಲಿದೆ? ಎಂದೂ ಅವರು ಕೇಳಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮತ್ತು ಅವುಗಳ ಮೇಲಿನ ತೆರಿಗೆಗಳಿಂದ ಗ್ರಾಹಕರು, ರೈತರು ಹಾಗೂ ಸಣ್ಣ ಉದ್ಯಮಿಗಳ ಮೇಲೆ ಬೀರುತ್ತಿರುವ ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ?. ರಾಜ್ಯ ಸರಕಾರವು ಕೋರಿರುವ 22,400.58 ಕೋಟಿ ರೂ., ಬರ ಪರಿಹಾರದ ನೆರವಿನ ಕುರಿತು ಕೇಂದ್ರ ಸರಕಾರ ಯಾವಾಗ ನಿರ್ಧಾರ ಕೈಗೊಳ್ಳಲಿದೆ? ಅನುಮೋದಿತ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಕಾಲಮಿತಿಯನ್ನು ಯಾವಾಗ ಪ್ರಕಟಿಸಲಿದೆ? ಎಂದು ಕೇಳಿರುವ ಅವರು, ಈ ನನ್ನ ಪ್ರಶ್ನೆಗಳಿಗೆ ಕೇಂದ್ರ ಸರಕಾರವು ಕೇವಲ ರಾಜಕೀಯ ಹೇಳಿಕೆಗಳ ಮೂಲಕವಲ್ಲ, ವಾಸ್ತವಾಂಶಗಳು ಮತ್ತು ನಿರ್ದಿಷ್ಟ ಕ್ರಮಗಳ ಆಧಾರದಲ್ಲಿ ಸಮರ್ಪಕ ಉತ್ತರಗಳನ್ನು ನೀಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಬಿಜೆಪಿ ನಾಯಕರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ರಾಜಕೀಯ ಅನುಕೂಲಕ್ಕಿಂತ ರಾಜ್ಯದ ಜನರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿ. ಬೆಲೆ ಏರಿಕೆ ಮತ್ತು ರೈತರ ಸಂಕಷ್ಟದ ಕುರಿತು ನಿಮಗೆ ನಿಜವಾಗಿಯೂ ಕಾಳಜಿಯಿದ್ದರೆ, ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಷ್ಟೇ ತೀವ್ರತೆಯಿಂದ ಕೇಂದ್ರ ಸರಕಾರದ ಮುಂದೆಯೂ ಈ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರಕ್ಕಾಗಿ ಒತ್ತಾಯಿಸಿ. ರಾಷ್ಟ್ರ ಮಟ್ಟದ ಆರ್ಥಿಕ ನಿರ್ವಹಣೆಯ ವೈಫಲ್ಯಗಳಿಂದ ಕರ್ನಾಟಕದ ಜನರು ಸಂಕಷ್ಟ ಅನುಭವಿಸುವಂತಾಗಬಾರದು. ಅದೇ ರೀತಿ ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ನೆರವು ನಿರಾಕರಿಸಲ್ಪಡುವ ಪರಿಸ್ಥಿತಿಯೂ ನಿರ್ಮಾಣವಾಗಬಾರದು ಎಂದು ಪರಮೇಶ್ವರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್ ದಳಸನೂರು\ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಸಮೀರ್ ದಳಸನೂರು ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ, ಆಕಾಶವಾಣಿಯಲ್ಲೂ ಅರೆಕಾಲಿಕ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಪ್ರಸ್ತುತ ಹಲವು ವರ್ಷಗಳಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.