ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: 2ನೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
ಓಂ ಪ್ರಕಾಶ್
ಬೆಂಗಳೂರು : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ಎರಡನೇ ಆರೋಪಿ ಕೃತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕೃತಗೊಳಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಓಂಪ್ರಕಾಶ್ ಅವರ ಪುತ್ರಿ ಹಾಗೂ ಆರೋಪಿ ಕೃತಿ, ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಕೃತಿ ಅವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು.
ಕೃತಿ ಅವರು ತಮ್ಮ ಅರ್ಜಿಯಲ್ಲಿ ತಾವು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ನಡೆಸಿದ ಎರಡು ದಿನಗಳ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಪ್ರಮುಖ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿಲ್ಲ. ಹಿಂದಿನ ಕಾಯಿಲೆಗಳಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಎಪ್ರಿಲ್ 24 ಮತ್ತು 29ರಂದು ತನಿಖಾಧಿಕಾರಿಗಳು ನೀಡಿರುವ ನೋಟಿಸ್‍ಗೆ ಕೃತಿ ವಿಚಾರಣೆಗೆ ಹಾಜರಾಗಿರಲಿಲ್ಲ, ಮೇ 3ರಂದು ಬರುವುದಾಗಿ ತಿಳಿಸಿದ್ದರು. ಆದಾಗ್ಯೂ, ಸಹ ಅವರು ವಿಚಾರಣೆಗೆ ಹಾಜರಾಗಿರುವುದಿಲ್ಲ. ಮೇ 5ರಂದು ಕಳುಹಿಸಲಾದ ಅಂತಿಮ ನೋಟಿಸ್ ಅನ್ನು ಅವರು ನಿರ್ಲಕ್ಷಿಸಿದ್ದಾರೆ ಎಂದು ಸಿಸಿಬಿ ತನಿಖಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಬಳಿಕ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿ ಕೃತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.