×
Ad

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪೊಲೀಸ್ ವಶಕ್ಕೆ

Update: 2025-04-20 21:18 IST

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಓಂ ಪ್ರಕಾಶ್ (68) ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, ಘಟನೆ ಸಂಬಂಧ ಅವರ ಪತ್ನಿ ಪಲ್ಲವಿಯನ್ನು ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ರವಿವಾರ ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿಯೇ ಓಂ ಪ್ರಕಾಶ್ ಕೊಲೆಯಾಗಿರುವ ಸ್ಥಿತಿಯಲ್ಲಿ ಬಿದ್ದಿದ್ದರು. ಈ ಕುರಿತು ಮೇಲ್ನೋಟಕ್ಕೆ ವಿಚಾರಣೆಗೊಳಪಡಿಸಿದಾಗ ಪತ್ನಿ ಪಲ್ಲವಿ ತಪ್ಪು ಒಪ್ಪಿಕೊಂಡಿದ್ದು, ಆನಂತರ ಆಕೆಯನ್ನು ಠಾಣೆಗೆ ಕರೆತಂದು ಪೋಲಿಸ್ ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿದೆ.

ದಂಪತಿ ಮಧ್ಯೆ ಇತ್ತೀಚಿಗೆ ಗಲಾಟೆ ನಡೆಯುತ್ತಿತ್ತು. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಪತಿ ಓಂ ಪ್ರಕಾಶ್ ಅವರು ‘ರಿವಾಲ್ವರ್ ಹಿಡಿದು ಮನೆಯೊಳಗೆ ಸುತ್ತುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ’ ಎಂದು ಪಲ್ಲವಿ ಅವರು ಐಪಿಎಸ್ ಅಧಿಕಾರಿಗಳೇ ಇರುವ ವಾಟ್ಸ್‌‌ ಆ್ಯಪ್ ಗುಂಪಿನಲ್ಲಿ ಸಂದೇಶ ಹಾಕಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ರವಿವಾರವೂ ಜಗಳ ನಡೆದಿದ್ದು, ಸಂಜೆ 4:30ರ ಸುಮಾರಿಗೆ ಪಲ್ಲವಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪತಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದ ಪತ್ನಿ ಪಲ್ಲವಿ, ಪೊಲೀಸರು ಮನೆಗೆ ತಲುಪುವಷ್ಟರಲ್ಲಿ ಮನೆಯ ಮೊದಲನೆ ಮಹಡಿ ಕೊಠಡಿ ಸೇರಿಕೊಂಡಿದ್ದಾರೆ. ಮಗಳೊಂದಿಗೆ ಕೊಠಡಿಯ ಬಾಗಿಲು ಹಾಕಿಕೊಂಡಿದ್ದು, ಹೊರಬರಲು ನಿರಾಕರಿಸಿದ್ದಾರೆ. ಇನ್ನೊಂದೆಡೆ, ಓಂ ಪ್ರಕಾಶ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಘಟನೆ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಓಂ ಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಮಡಿವಾಳ ಬಳಿಯ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಯಾರು ಓಂ ಪ್ರಕಾಶ್?:

ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆ ಮೂಲದ ಓಂ ಪ್ರಕಾಶ್ ಅವರು ಐಪಿಎಸ್ ಅಧಿಕಾರಿಯಾದ ನಂತರ ಮೊದಲ ಬಾರಿಗೆ ಅಂದಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಎಎಸ್‍ಪಿ ಆಗಿ ರಾಜ್ಯದಲ್ಲಿ ವೃತ್ತಿ ಆರಂಭ ಮಾಡಿದ್ದರು. ಇದಾದ ನಂತರ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ರಾಜ್ಯ ವಿಜಿಲೇನ್ಸ್ ಸೆಲ್‍ನ ಎಸ್ಪಿಯಾಗಿ, ಕರ್ನಾಟಕ ಲೋಕಾಯುಕ್ತದಲ್ಲಿ, ಅಗ್ನಿಶಾಮಕ ದಳದ ಡಿಐಜಿ, ಸಿಐಡಿ ಐಜಿಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2015 ಮಾರ್ಚ್‍ನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದ ಓಂ ಪ್ರಕಾಶ್ ಅವರು 2017ರಲ್ಲಿ ನಿವೃತ್ತಿ ಹೊಂದಿದ್ದರು ಎಂದು ಗೊತ್ತಾಗಿದೆ.

ಗಲಾಟೆ ಏಕೆ?:

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆಗೆ ಕೌಟುಂಬಿಕ ಕಲಹವೇ ಕಾರಣವಿರಬಹುದು ಎಂದು ತಿಳಿದುಬಂದಿದೆ. ಓಂ ಪ್ರಕಾಶ್ ಹಾಗೂ ಅವರ ಪತ್ನಿ ಜಗಳ ನೆರೆ ಹೊರೆ, ಸಂಬಂಧಿಕರು ಹಾಗೂ ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ತಿಳಿದಿತ್ತು. ಕೆಲ ದಿನಗಳಿಂದ ಜಗಳ ತಾರಕಕ್ಕೇರಿ ಪತ್ನಿ ಮನೆಯಲ್ಲಿ ದೊಡ್ಡ ರಾದ್ಧಾಂತವನ್ನೇ ಮಾಡಿದ್ದರು ಎನ್ನಲಾಗಿದೆ. ಓಂ ಪ್ರಕಾಶ್ ಅವರು ತಮ್ಮ ಸಹೋದರಿ ಹೆಸರಲ್ಲಿ ಜಮೀನು ಮಾಡಿದ್ದು ಅದನ್ನು ಹಿಂಪಡೆಯುವಂತೆ ಗಂಡನ ಮೇಲೆ ಜಗಳ ಮಾಡುತ್ತಿದ್ದರು ಎನ್ನುವ ಮಾತುಗಳೂ ಕೇಳಿಬಂದಿವೆ.

ಪುತ್ರನಿಂದಲೇ ದೂರು:

ಘಟನೆ ಸಂಬಂಧ ಓಂ ಪ್ರಕಾಶ್ ಅವರ ಪುತ್ರ ದೂರು ನೀಡಲಾಗಿದ್ದು, ಈ ಸಂಬಂಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಶಂಕೆ ಮೇರೆಗೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News