ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಟೀಕಿಸಿದ ರೋಹಿತ್ ಶರ್ಮಾ

Update: 2024-04-18 17:09 GMT

Pc : X@ultimate__d

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಧ್ವನಿ ಎತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ಭಾರತೀಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗಹುದು ಎಂದು ಆತಂಕ ವ್ಯಕ್ತಪಡಿಸಿದರು.

ಈ ನಿಯಮವು ಆಲ್‌ರೌಂಡರ್‌ಗಳ ಬೆಳವಣಿಗೆಯನ್ನು ತಡೆ ಹಿಡಿಯುತ್ತದೆ ಎಂದು ನಾನು ಸಾಮಾನ್ಯವಾಗಿ ಭಾವಿಸುತ್ತೇನೆ. ಏಕೆಂದರೆ ಕ್ರಿಕೆಟನ್ನು 11 ಆಟಗಾರರು ಆಡುತ್ತಾರೆಯೇ ಹೊರತು 12 ಆಟಗಾರರಲ್ಲ ಎಂದು ರೋಹಿತ್ ಹೇಳಿದರು.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವನ್ನು ಪ್ರಶ್ನಿಸಿದ ರೋಹಿತ್, ನಾನು ಇಂಪ್ಯಾಕ್ಟ್ ಆಟಗಾರ ನಿಯಮದ ದೊಡ್ಡ ಅಭಿಮಾನಿಯಲ್ಲ. ಸುತ್ತಮುತ್ತಲಿನ ಜನರಿಗೆ ಸ್ವಲ್ಪಮಟ್ಟಿನ ಮನರಂಜನೆ ನೀಡಲು ಕ್ರಿಕೆಟ್‌ನಲ್ಲಿ ಇಂತಹ ನಿಯಮ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಕೊಡುಗೆ ನೀಡುವ ವಾಶಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಅವರಂತಹ ಆಟಗಾರರ ಮೇಲೆ ನಿಯಮದ ಪ್ರಭಾವವನ್ನು ರೋಹಿತ್ ಎತ್ತಿ ತೋರಿಸಿದರು.

2023ರ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲಾಗಿತ್ತು. ಈ ನಿಯಮವು ಟಾಸ್ ನಂತರ ಪಂದ್ಯದ ಯಾವುದೇ ಹಂತದಲ್ಲಿ ಆಡುವ 11ರ ಬಳಗದಲ್ಲಿನ ಆಟಗಾರನ ಬದಲಿಗೆ 12ನೇ ಆಟಗಾರನನ್ನು ಆಡಿಸಲು ತಂಡಗಳಿಗೆ ಅವಕಾಶ ನೀಡುತ್ತದೆ.

ರೋಹಿತ್ ಟೀಕೆಯ ಹೊರತಾಗಿಯೂ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿದೆ. ಇದು ತಂಡದ ಸಂಯೋಜನೆ ಹಾಗೂ ಆಟಗಾರರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಕುರಿತ ಚರ್ಚೆಗೆ ಗ್ರಾಸ ಒದಗಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News