×
Ad

‘ಸದಾಶಿವ ಆಯೋಗದ ವರದಿʼ ಸಂಪುಟದಲ್ಲಿ ಚರ್ಚಿಸಿ, ಸಾಂವಿಧಾನಿಕ ನಿರ್ಧಾರ: ಸಚಿವ ಎಚ್.ಸಿ.ಮಹದೇವಪ್ಪ ಭರವಸೆ

Update: 2023-10-31 22:34 IST

ಬೆಂಗಳೂರು, ಅ. 31: ಬಿಜೆಪಿ ಅವಧಿಯಲ್ಲಿ ತಿರಸ್ಕಾರಗೊಂಡಿರುವ ಸದಾಶಿವ ಆಯೋಗದ ವರದಿಯನ್ನು ಕ್ಯಾಬಿನೆಟ್‍ನಲ್ಲಿ ಚರ್ಚೆಗೆ ತಂದು ಸಂವಿಧಾನಾತ್ಮಕವಾಗಿ ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಶ್ವಾಸನೆ ನೀಡಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಒಳಮೀಸಲಾತಿ ಜಾರಿ ಮತ್ತು ಇನ್ನಿತರ ಬೇಡಿಕೆಗಳಿಗಾಗಿ ನಡೆಸಿದ ಧರಣಿಯ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸದಾಶಿವ ವರದಿಯ ಜಾರಿಗೆ ಸಂಬಂಧಿಸಿದಂತೆ, ಅಂಬೇಡ್ಕರ್ ಅವರ ಆಶಯಕ್ಕೆ ಅನುಗುಣವಾಗಿ ದಲಿತ ಸಮುದಾಯಗಳ ಮೀಸಲಾತಿಯ ಹಕ್ಕನ್ನು ನ್ಯಾಯಬದ್ದವಾಗಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಲಿದೆ ಎಂದರು.

ಛಲವಾದಿಗಳು ಮತ್ತು ಮಾದಿಗರು ಈ ಹಿಂದೆ ತಮ್ಮ ಹಕ್ಕುಗಳನ್ನು ಹಂಚಿಕೊಳ್ಳಲು ಹಲವು ಸಭೆಗಳನ್ನು ನಡೆಸಿದ್ದಾರೆ. ಆದರೆ ಪರಿಶಿಷ್ಟರ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಕ್ಯಾಬಿನೆಟ್‍ನಲ್ಲಿ ಅನುಮೋದನೆ ಪಡೆದು ಅದು ಕೇಂದ್ರದಲ್ಲಿ ಚರ್ಚೆಯಾಗಿ ಊರ್ಜಿತಗೊಂಡಾಗ ಮಾತ್ರ ಒಳ ಮೀಸಲಾತಿಯ ಬೇಡಿಕೆಗೆ ಹೆಚ್ಚು ಮಾನ್ಯತೆ ಸಿಗುತ್ತದೆ ಎಂದು ಅವರು ತಿಳಿಸಿದರು.

ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಜಾತಿ ಗಣತಿಯನ್ನೂ ಜಾರಿ ಮಾಡಿ ನ್ಯಾಯಬದ್ದ ಹಕ್ಕುಗಳನ್ನು ನೀಡುವತ್ತ ಸರಕಾರ ಶ್ರಮಿಸಲಿದ್ದು, ದೇಶಾದ್ಯಂತ ಜಾತಿ ಗಣತಿಯನ್ನು ಮಾಡಬೇಕು ಎಂಬುದು ನಮ್ಮ ನಾಯಕರ ಉದ್ದೇಶವೂ ಆಗಿದೆ ಎಂದು ಮಹದೇವಪ್ಪ ಹೇಳಿದರು.

ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕಾನಾಥ್ ಮಾತನಾಡಿ, ಒಳ ಮೀಸಲಾತಿ ಜಾರಿಯಾದರೆ ಹೊಲೆ ಮಾದಿಗರಿಗಷ್ಟೇ ಅಲ್ಲ, ಇನ್ನೂ ಬೆಳಕನ್ನೇ ಕಾಣದ ನೂರಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳಿಗೂ ಸ್ವಾಭಿಮಾನದ ಬದುಕು ದಕ್ಕುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಒಳ ಮೀಸಲಾತಿಯ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸುಗೊಳಿಸಲೇ ಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಸಮುದಾಯದ ಮುಖಂಡ ಹನುಮಂತಪ್ಪ ಮಾತನಾಡಿ, 89 ಅಲೆಮಾರಿ ಸಮುದಾಯಗಳಿಗೆ ಕೇವಲ ಒಂದು ಪರ್ಸೆಂಟ್ ಮೀಸಲಾತಿ ಕೊಡಲಾಗಿದೆ. ಈ ಅನ್ಯಾಯ ಸರಿಯಾಗಬೇಕಾದರೆ ಒಳ ಮೀಸಲಾತಿ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಮುಖಂಡರಾದ ಎನ್.ವೆಂಕಟೇಶ್, ಎನ್. ಮುನಿಸ್ವಾಮಿ, ಬಸವರಾಜ್ ಕೌತಾಳ, ಬಿ.ಗೋಪಾಲ್, ಅಂಬಣ್ಣ ಅರೋಲಿಕರ್, ವೈ.ಸಿ.ಕಾಂಬ್ಳೆ, ಸಣ್ಣಮಾರಣ್ಣ, ಬಿ.ಪಿ.ತಿಪ್ಪೇಸ್ವಾಮಿ, ಮಾ.ಮುನಿರಾಜು, ಗುರುಮೂರ್ತಿ, ಸೂಲುಕುಂಟೆ ರಮೇಶ್, ಕರಿಯಪ್ಪ ಗುಡಿಮನಿ, ಬಿ.ಶಿವಣ್ಣ, ಉಮಾದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News