ಭೂ ಕಂದಾಯ (ಎರಡನೆ ತಿದ್ದುಪಡಿ) ವಿಧೇಯಕ ಪರ್ಯಾಲೋಚಿಸಿ ಅಂಗೀಕರಿಸಲು ಆಯ್ಕೆ ಸಮಿತಿ ರಚನೆ: ಯು.ಟಿ.ಖಾದರ್
ಬೆಂಗಳೂರು: 2025ನೆ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಪ್ರಕಟಿಸಿದರು.
ಗುರುವಾರ ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕಂದಾಯ ಸಚಿವರ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದರು.
ಬಳಿಕ ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಅವರು, ವಿಧೇಯಕವು ಅಸಂಗತವಲ್ಲದ ಮತ್ತು ಅವಿಭಕ್ತ ಕುಟುಂಬದ ಎಲ್ಲ ಅದಿಭೋಗದಾರರ ಹೆಸರುಗಳ ಅನುಸಾರ ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಭೂಮಿಗಳಿಗೆ ನಿಯಮಿಸಲಾದ ವಿಧಾನದಲ್ಲಿನ ಇತರೆ ಸೇರ್ಪಡೆಗಳು, ರದ್ದತಿಗಳು ಮತ್ತು ಸರಪಡಿಸುವಿಕೆಗಳು ಸಂಬಂಧಿಸಿದಾಗಿದ್ದು ಈ ವಿಧೇಯಕವು ತಿದ್ದುಪಡಿಗೆ ತದ್ವಿರುದ್ದವಾಗಿದೆ ಎಂದರು.
ಈ ವಿಧೇಯಕವನ್ನು ಮತ್ತೊಮ್ಮೆ ಪರ್ಯಾಲೋಚಿಸಿ ತಿದ್ದುಪಡಿ ಮಾಡುವುದು ಅಗತ್ಯವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ವಿಪಕ್ಷ ಸದಸ್ಯರು ಸಹ ಇದೊಂದು ಗಂಭೀರ ವಿಚಾರವಾಗಿದ್ದು ಪರಿಶೀಲನೆ ಮಾಡುವುದು ಅಗತ್ಯವಾಗಿರುತ್ತದೆ ವಿಧಾನಸಭೆ ಆಯ್ಕೆ ಸಮಿತಿ ರಚಿಸಿ ಆಯ್ಕೆ ಸಮಿತಿಯ ಮುಂದೆ ಮಂಡಿಸಿ ತೀರ್ಮಾನಿಸುವುದು ಸೂಕ್ತವೆಂದು ನುಡಿದರು.
ಆನಂತರ ಯು.ಟಿ.ಖಾದರ್ ಅವರು, ಈ ವಿಧೇಯಕವನ್ನು ಪರ್ಯಾಲೋಚಿಸಿ ಇತ್ಯರ್ಥಪಡಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಕಟಿಸಿದರು.