ಶಿವಮೊಗ್ಗ | ಮಗುವಿನ ಕತ್ತು ಕೊಯ್ದು ಹತ್ಯೆ; ತನಿಖೆಯಿಂದ ಬಯಲಾಯ್ತು ಹೆತ್ತಮ್ಮನ ಹೇಯ ಕೃತ್ಯ!
ಆರೋಪಿ ಶೈಲಾ
ಶಿವಮೊಗ್ಗ(ಆ.23) : ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಮೃತದೇಹ ಪತ್ತೆಯಾದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆತ್ತ ತಾಯಿಯೇ 1 ದಿನದ ಗಂಡು ಮಗವನ್ನು ಕತ್ತು ಕೊಯ್ದು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಆ.16ರ ಶನಿವಾರದಂದು ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯಲದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಎಂಬಾಕೆಯನ್ನು ಬಂಧಿಸಿದ್ದಾರೆ.
ತನಿಖೆ ಕೈಗೊಂಡ ದೊಡ್ಡಪೇಟೆ ಪೊಲೀಸರಿಗೆ ಆರಂಭದಲ್ಲೇ ಹೆರಿಗೆ ವಾರ್ಡ್‌ನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಶೈಲಾ ಮೇಲೆ ಅನುಮಾನವಿತ್ತು. ಆದರೆ, ದಂಪತಿ ಮಗು ತಮ್ಮದಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಆ ದಿನ ಹೆರಿಗೆ ವಾರ್ಡ್‌ನಲ್ಲಿ ಆಗಿರುವ ಹೆರಿಗೆ ಮತ್ತು ತಾಯಂದಿರ ಎಲ್ಲ ಮಾಹಿತಿ ಕಲೆ ಹಾಕಿದ್ದರು.
4-5 ದಿನಗಳಿಂದ ದೊಡ್ಡಪೇಟೆ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸಿ, ಹೆರಿಗೆ ವಾರ್ಡ್‌ಗೆ ಇಬ್ಬರು ಮಹಿಳಾ ಪೊಲೀಸ್ ಪೇದೆಗಳನ್ನು ಗಸ್ತಿನಲ್ಲಿ ನಿಯೋಜಿಸಿದ್ದರು. ದಿನಗಳು ಕಳೆದಂತೆ ಪೊಲೀಸರಿಗೆ ಶೈಲಾ ಮೇಲೆ ಅನುಮಾನ ದಟ್ಟವಾಗಿತ್ತು. ಶೈಲಾ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಹೊರ ಬರುತ್ತಿದ್ದಂತೆ ದೊಡ್ಡಪೇಟೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.
ಆ.16ರಂದು ಶೈಲಾ ನಾದಿನಿಯ ಹೆರಿಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಆಗಿತ್ತು. ಅವರನ್ನು ನೋಡಲು ಆಸ್ಪತ್ರೆಗೆ ಬಂದಾಗ ಶೈಲಾಗೂ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಲಿಬಿಲಿಗೊಂಡ ಶೈಲಾ, ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.
ಆ ದಿನ ಶೌಚಾಲಯದಲ್ಲಿ ಒಬ್ಬಳೇ ನಾರ್ಮಲ್ ಹೆರಿಗೆ ಮಾಡಿಕೊಂಡಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಮಗುವಿನ ಕತ್ತು ಕೋಯ್ದು ಕೊಲೆ ಮಾಡಿರುವುದಾಗಿ ದೊಡ್ಡಪೇಟೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಶೈಲಾ ಹೇಳಿಕೆ ಮತ್ತು ಕೆಲ ಸಾಕ್ಷಿಗಳ ಆಧಾರ ಮೇಲೆ ದೊಡ್ಡಪೇಟೆ ಪೊಲೀಸರು ಆರೋಪಿ ಶೈಲಾಳನ್ನು ಬಂಧಿಸಿದ್ದಾರೆ.