×
Ad

ಮಣ್ಣಲ್ಲಿ ಮಣ್ಣಾದ ಕಲಾವಧು ಲೀಲಾವತಿ

Update: 2023-12-09 20:36 IST

ಬೆಂಗಳೂರು, ಡಿ.9: ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಶನಿವಾರ ಸಂಜೆ ನೆಲಮಂಗಲ ಸಮೀಪವಿರುವ ಸೋಲದೇವನಹಳ್ಳಿ ಗ್ರಾಮದ ಅವರ ತೋಟದ ಮನೆಯಲ್ಲಿ ಬಂಟರ ಸಮುದಾಯದ ಪ್ರಕಾರ ನಡೆಯಿತು.

ಕರ್ನಾಟಕ ಸರಕಾರದ ಪರವಾಗಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸಕಲ ಸರಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಲೀಲಾವತಿ ಅವರ ಪುತ್ರ ವಿನೋದ್‍ರಾಜ್ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ನಾಯಕರು, ಚಿತ್ರರಂಗದ ಗಣ್ಯರು, ಕುಟುಂಬಸ್ಥರು ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ ಎನ್., ಜಿಲ್ಲಾ ಪೊಇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಅನುರಾಧ ಕೆ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶಿಲ್ದಾರ್ ಅರುಂಧತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಂತಿಮ ದರ್ಶನ ಪಡೆದ ಗಣ್ಯರು: ಶನಿವಾರ ಬೆಳಗ್ಗೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಲೀಲಾವತಿಯವರ ಕಲಾಸೇವೆಯನ್ನು ಗೌರವಿಸುವ ಉದ್ದೇಶದಿಂದ ಅಂಬೇಡ್ಕರ್ ಮೈದಾನದಿಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟಿಯರಾದ ಸುಧಾರಾಣಿ, ಮಾಳವಿಕಾ ಅವಿನಾಶ್, ತಾರಾ, ನಟರಾದ ರಮೇಶ್ ಅರವಿಂದ್, ಟಿ.ಎಸ್.ನಾಗಾಭರಣ, ಸಾಧು ಕೋಕಿಲ, ಶಶಿಕುಮಾರ್, ಕುಮಾರ್ ಗೋವಿಂದ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಯುವ ನಟ ನವೀನ್ ಶಂಕರ್, ಭವ್ಯ, ಶ್ರುತಿ, ಉಮಾಶ್ರೀ, ಪೋಷಕ ನಟ ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸ್ ಮೂರ್ತಿ, ರಮೇಶ್ ಭಟ್, ನಿರ್ದೇಶಕ ನಾಗಣ್ಣ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಪೋಷಕ ನಟರಾದ ಶಿವಕುಮಾರ್, ರಕ್ಷಾ, ಅಭಿನಯ, ಶೈಲಶ್ರೀ ಸೇರಿದಂತೆ ಸಾಕಷ್ಟು ಕಲಾವಿದರು, ಸಾರ್ವಜನಿಕರು, ಅಭಿಮಾನಿಗಳು ಲೀಲಾವತಿಯವರ ದರ್ಶನ ಪಡೆದರು.

50 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಲೀಲಾವತಿ ಅವರು, ಬರೋಬ್ಬರಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಇತ್ತೀಚೆಗೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಲೀಲಾವತಿ ಅವರ ನಿವಾಸಕ್ಕೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು. ಆದರೆ ಶುಕ್ರವಾರ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಹಿರಿಯ ನಟಿ ಲೀಲಾವತಿ ಅವರ ಜೀವನ ಮತ್ತು ಆದರ್ಶ ಸದಾ ಸ್ಪೂರ್ತಿ ಮತ್ತು ದಾರಿ ದೀಪವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದ್ದು, ಅವರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಲೀಲಾವತಿ ಅವರು ಕಟ್ಟಿಸಿದ ಪಶುವೈದ್ಯ ಶಾಲೆ ಉದ್ಘಾಟನೆ ಮಾಡಿದ್ದು ನನ್ನ ಭಾಗ್ಯ ಮತ್ತು ಸಮಾಧಾನ ತಂದಿದೆ. ಇಡೀ ಜೀವನವನ್ನು ತಾಯಿಗೆ ಸೇವೆ ಮಾಡಿದ ಆದರ್ಶ ವ್ಯಕ್ತಿ ವಿನೋದ್ ರಾಜ್ ಕೆಲಸ ಎಲ್ಲರಿಗೂ ಆದರ್ಶ

- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.

ಹಿರಿಯ ನಟಿ ಲೀಲಾವತಿ ಅವರು ಬೆಳ್ತಂಗಡಿಯಲ್ಲಿ ಹುಟ್ಟಿ, ದೊಡ್ಡ ಮಟ್ಟದಲ್ಲಿ ಬೆಳೆದ ಪರಿ ಸೋಜಿಗ.  ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರ ಅಗಳಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದ ಅವರು ಅಭಿಜಾತ ಕಲಾವಿದೆ.

-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ಜೀವನದಲ್ಲಿ ನಮಗೆ ಬರುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಅದನ್ನು ನಾವು ಲೀಲಾವತಿ ಅವರಿಂದ ಕಲಿತಿದ್ದೇವೆ. ಎಲ್ಲರಿಗೂ ನೋವು, ಕಷ್ಟ ಬರುತ್ತದೆ. 600 ಚಿತ್ರಗಳಲ್ಲಿ ಅಭಿನಯಿಸಿ, ಸಿಂಗಲ್ ಪೇರೆಂಟ್ ಆದರು. ಆಯುಷ್ಯದ ಕೊನೆವರೆಗೂ ಮಾನಸಿಕವಾಗಿ ಚೆನ್ನಾಗಿದ್ದರು. ಅವರೋರ್ವ ಹೃದಯವಂತೆಯಾಗಿದ್ದರು. ವಿನೋದ್‍ಗೆ ಲೀಲಾವತಿ ಪಾಠ ಹೇಳುತ್ತಿದ್ದರು. ಅವೆಲ್ಲ ನಮಗೂ ಪಠ್ಯ ಪುಸ್ತಕ ಆಗಬೇಕು. ಲೀಲಾವತಿ ಅವರು ನಮಗೆ ದೊಡ್ಡ ಆಸ್ತಿ. ತಾಯಿ ಮಗ ಬದುಕಿದ ರೀತಿ ನಮಗೆ ಆದರ್ಶ. ಕೃಷಿಯನ್ನು ಇಷ್ಟಪಟ್ಟು ಮಾಡುತ್ತಿದ್ದರು. ಮನೆಗೆ ಊಟಕ್ಕೆ ಎಲ್ಲರನ್ನೂ ಕರೆಯುತ್ತಿದ್ದರು. ಭೂಮಿಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಹೇಳುತ್ತಿದ್ದರು.

-ಶ್ರುತಿ, ಕನ್ನಡ ಚಲನಚಿತ್ರ ನಟಿ.

‘ಅಮ್ಮನ ಆಶಯದಂತೆ ಬದುಕು ಸಾಗಿಸುತ್ತೇನೆ!’

56 ವರ್ಷಗಳ ಕಾಲ ತಾಯಿ ಜೊತೆ ಕಾಲ ಕಳೆದೆ. ನನ್ನಮ್ಮ ಪ್ರೀತಿಗೆ ಕೊರತೆ ಮಾಡಲಿಲ್ಲ. ಜೀವನ ಪೂರ್ತಿ ನನ್ನ ಕೈಹಿಡಿದುಕೊಂಡೇ ಕಳೆದುಹೋದರು. ನೀರು ಕುಡಿಯುವಾಗಲೇ ಪ್ರಾಣಬಿಟ್ಟರು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನು 2-3 ತಿಂಗಳಿಂದ ಊಟ ಮಾಡುವುದನ್ನೇ ಬಿಟ್ಟಿದ್ದೆ. ಶಿವರಾಜ್‍ಕುಮಾರ್ ನಿರಾಶರಾಗಬೇಡಿ ಎಂದು ಹೇಳಿದ್ದಾರೆ. ಎಷ್ಟು ಬೇಡಿಕೊಂಡರೂ ತಾಯಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಮ್ಮ ಹೇಳಿದ ತಾಳ್ಮೆ, ಸಮಾಧಾನ ಯಾರೂ ಹೇಳಲು ಸಾಧ್ಯವಿಲ್ಲ. ಅವರ ಸಾಕಷ್ಟು ಕನಸುಗಳಿದ್ದವು, ಬಾಕಿಯಿರುವ ಕೆಲಸ ಮಾಡುತ್ತೇನೆ. ಮನೆಯಿಂದ ಹೊರಡುವಾಗ ಐವತ್ತು, ನೂರು ಕೊಟ್ಟು ಹೋಗುತ್ತಿದ್ದರು. ನಮಗಿಂತ ಬಡತನದಲ್ಲಿರುವವರ ಬೆನ್ನಿಗೆ ನಿಲ್ಲಬೇಕು ಎಂದು ಅಮ್ಮ ಹೇಳುತ್ತಿದ್ದರು, ಅವರ ಆಶಯದಂತೆ ಬದುಕು ಸಾಗಿಸಲು ಪ್ರಯತ್ನಿಸುತ್ತೇನೆ.

-ವಿನೋದ್‍ರಾಜ್, ಲೀಲಾವತಿ ಅವರ ಪುತ್ರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News