ನಿಮ್ಮ ಹೋರಾಟವನ್ನು ಮತದಾರರ ಮುಂದೆ ನಡೆಸಿ: ಕರ್ನಾಟಕ ಸರಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು
ಹೊಸದಿಲ್ಲಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಎಫ್‌ಐಆರ್ ರದ್ದುಗೊಳಿದ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ, ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಈ ವೇಳೆ ನ್ಯಾಯಮೂರ್ತಿಗಳು ರಾಜ್ಯ ಸರ್ಕಾರದ ವಕೀಲರಿಗೆ, "ವಿಷಯವನ್ನು ರಾಜಕೀಯಗೊಳಿಸಬೇಡಿ. ಮತದಾರರ ಮುಂದೆ ನಿಮ್ಮ ಹೋರಾಟಗಳನ್ನು ಮಾಡಿ" ಎಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
2024ರ ನವೆಂಬರ್ 7ರಂದು ತೇಜಸ್ವಿ ಸೂರ್ಯ ಅವರು ತಮ್ಮ X ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಇದರಲ್ಲಿ ಹಾವೇರಿ ಜಿಲ್ಲೆಯ ರೈತರೊಬ್ಬರು ತನ್ನ ಭೂಮಿಯನ್ನು ವಕ್ಫ್ ಮಂಡಳಿ ವಶಪಡಿಸಿಕೊಂಡಿದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದರು
ತನಿಖೆಯಲ್ಲಿ ಈ ಮಾಹಿತಿ ಸುಳ್ಳು ಎಂದು ಸ್ಪಷ್ಟವಾಯಿತು. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಪ್ರಕಾರ, ರೈತನು ಬೆಳೆ ನಷ್ಟ ಹಾಗೂ 7 ಲಕ್ಷ ರೂ. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದನು ಎಂಬುದಾಗಿ ಮೃತರ ತಂದೆಯು ಕೂಡ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ತಮ್ಮ ಪೋಸ್ಟ್ ಅನ್ನು ಅಳಿಸಿ ಹಾಕಿದ್ದರು.
ಈ ಪೋಸ್ಟ್ ಆಧಾರರಹಿತ ಎಂದು ಗೊತ್ತಾದ ನಂತರ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ, 2023 (ಬಿಎನ್‌ಎಸ್) ಸೆಕ್ಷನ್ 353(2) ಅಡಿಯಲ್ಲಿ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಈ ಎಫ್‌ಐಆರ್ ಕುರಿತು ತೇಜಸ್ವಿ ಸಲ್ಲಿಸಿದ್ದ ಅರ್ಜಿಯಲ್ಲಿ, ಹೈಕೋರ್ಟ್ ಪೀಠವು, "ಟ್ವೀಟ್ ಮಾಡಲಾಗಿದೆ, ನಂತರ ಸ್ಪಷ್ಟಪಡಿಸಲಾಗಿದೆ ಮತ್ತು ಅಳಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ತನಿಖೆ ನಡೆಸಲು ಸಾಕಷ್ಟು ಆಧಾರವಿಲ್ಲ. ಇದನ್ನು ಮುಂದುವರಿಸಿದರೆ ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ," ಎಂಬುದಾಗಿ ಅಭಿಪ್ರಾಯಪಟ್ಟು ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು.
ಕರ್ನಾಟಕ ಸರ್ಕಾರ ಈ ತೀರ್ಪು ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್‌ನ ತೀರ್ಪು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ರಾಜ್ಯದ ಮೇಲ್ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.