×
Ad

ಯಾರದೋ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ: ಬಿ.ವೈ. ವಿಜಯೇಂದ್ರ ಟೀಕೆ

Update: 2025-10-07 19:46 IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ದಿನೇ ದಿನೇ ಗೊಂದಲಮಯವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಆರೋಪಿಸಿದ್ದಾರೆ.

ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ದಿನಕ್ಕೊಂದು ಬದಲಾವಣೆ ಹೇಳುತ್ತಿದೆ. ಆಯೋಗವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ, ಯಾರದೋ ಒತ್ತಡಕ್ಕೆ ಮಣಿದು ಗಣತಿ ಮಾಡುತ್ತಿದೆ. ಮೊನ್ನೆ ಡಿ.ಕೆ.ಶಿವಕುಮಾರ್, 60 ಪ್ರಶ್ನೆಗಳಿಗೆ ಯಾರು ಉತ್ತರ ಕೊಡಲು ಸಾಧ್ಯ ಎಂದಿದ್ದಾರೆ. ಅಸಂಬದ್ಧವಾಗಿ ಅನೇಕ ಪ್ರಶ್ನೆಗಳನ್ನು ಸೇರಿಸಿದ್ದಾರೆ ಎಂದು ಟೀಕಿಸಿದರು.

ಶಿಕ್ಷಕರಿಗೂ ತೊಂದರೆ ಆಗುತ್ತಿದೆ. ಅವರಿಗೂ ಕುಟುಂಬ, ಎಲ್ಲವೂ ಇರುತ್ತದೆ. ವಿಕಲಚೇತನರನ್ನೂ ಬಳಸಿಕೊಂಡಿದ್ದು ಸಾಕಷ್ಟು ಟೀಕೆಗಳು ಬಂದಿವೆ. ಹಾಸನದ ಬೇಲೂರಿನಲ್ಲಿ ನಾಯಿ ಕಚ್ಚಿದ ಘಟನೆಯೂ ಆಗಿದೆ. ಇಂತಹ ಹಲವಾರು ಘಟನೆಗಳಿಂದ ಹಲವರಿಗೆ ಗಾಯವಾಗಿದೆ. ಒಟ್ಟಾರೆಯಾಗಿ ಒತ್ತಡಕ್ಕೆ ಮಣಿದು ಆತುರಾತುರವಾಗಿ ಈ ರೀತಿ ಸಮೀಕ್ಷೆ ಮಾಡಲು ಹೊರಟಿದ್ದಾರೆ ಎಂದು ಅವರು ದೂರಿದರು.

ನಾವೇನಾದರೂ ಹೆಚ್ಚು ಮಾತನಾಡಿದರೆ, ಬಿಜೆಪಿಯವರು ಹಿಂದುಳಿದವರ ವಿರೋಧಿಗಳು, ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಗಬಾರದೆಂದು ಮಾತನಾಡುತ್ತಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಈ ರಾಜ್ಯ, ದೇಶದ ಎಸ್‍ಸಿ-ಎಸ್‍ಟಿ ಸೇರಿದಂತೆ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿಗೆ ಹೆಚ್ಚಾಗಿ ಇರುವಂತಹದ್ದು ಎಂದು ಹೇಳಿದರು.

ಆ ಬದ್ಧತೆಯ ಕಾರಣದಿಂದ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ಬಂದ ನಂತರ ಯಾವುದೇ ಕೇಂದ್ರ ಸರಕಾರಗಳು ಮಾಡದ ತೀರ್ಮಾನ ಮಾಡಿದ್ದಾರೆ. ಅವರ ತೀರ್ಮಾನದಂತೆ ದೇಶಾದ್ಯಂತ ಜನಗಣತಿಯ ಜಾತಿ ಜನಗಣತಿ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಸಮೀಕ್ಷೆ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News