×
Ad

ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದ ವಿಬಿ- ಜೀ ರಾಮ್ ಜಿ ಕಾಯ್ದೆ ವಿರುದ್ಧದ ಸರಕಾರಿ ಜಾಹೀರಾತು

Update: 2026-01-29 12:44 IST

ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ- ಜೀ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಸರಕಾರ ಇಂದು ದಿನಪತ್ರಿಕೆಗಳಲ್ಲಿ ಹೊರಡಿಸಿರುವ ಜಾಹೀರಾತು ವಿಧಾನಸಭಾ ಕಲಾಪದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಶಾಸಕ ಸುರೇಶ್ ಕುಮಾರ್, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಈ ಜಾಹೀರಾತು ನೀಡಿರುವುದು ಸಾರ್ವಜನಿಕ ತೆರಿಗೆಯ ಲೂಟಿ ಎಂದು ಟೀಕಿಸಿದರು.

ಸೇಡಿನ ರಾಜಕೀಯಕ್ಕಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿರುವುದು ಸರಿಯಲ್ಲ. ಪಕ್ಷದ ವತಿಯಿಂದ ಬೇಕಿದ್ದರೆ ಜಾಹೀರಾತು ನೀಡಲಿ ಎಂದು ವಿಪಕ್ಷಗಳು ಒತ್ತಾಯಿಸಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಒಪ್ಪಿಕೊಳ್ಳಬೇಕು. ರಾಜ್ಯ ಸರಕಾರ ಜಾರಿಗೆ ತಂದಿರುವ ಯಾವುದೋ ಯೋಜನೆ, ಕಾಯ್ದೆಗಳಿಗೆ ಬಿಜೆಪಿ ಬೆಂಬಲಿತ ಗ್ರಾಪಂಗಳು, ನಗರ ಸಭೆಗಳು, ಜಿಲ್ಲಾ ಪಂಚಾಯತ್ ಗಳು ವಿರೋಧಿಸಿ ಜಾಹೀರಾತು ಕೊಟ್ಟರೆ ಸರಕಾರ ಒಪ್ಪುತ್ತದೆಯೇ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.

ನಮಗೆ ಕೇಂದ್ರ ಸರಕಾರದಿಂದ ಬರಬೇಕಿದ್ದ ಹಣವನ್ನು ಸುಪ್ರೀಂ ಕೋರ್ಟ್ ಮೂಲಕ ತರಬೇಕಾಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಆಗ ನಿಮಗೆ ಒಕ್ಕೂಟ ವ್ಯವಸ್ಥೆ ನೆನಪಾಗುವುದಿಲ್ಲ ಎಂದು ಬಿಜೆಪಿರ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಪ್ರತಿ ವಾಗ್ದಾಳಿ ನಡೆಸಿದರು.

ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ಜಾಹೀರಾತಿಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡಲು ಮುಂದಾಗುತ್ತಿದ್ದಂತೆ ವಿಪಕ್ಷ ಬಿಜೆಪಿಗರು ಅಡ್ಡಿಪಡಿಸಿದರು. ಬಳಿಕ ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಕೋಲಾಹಲ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಸದನವನ್ನು ಮುಂದೂಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News