ಮುಖ್ಯಮಂತ್ರಿಯ ಮೇಲೆ ಸಂಪೂರ್ಣ ನಂಬಿಕೆಯಿದೆ, ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸದು: ರಾಜೀನಾಮೆ ವದಂತಿಗೆ ಕೆ.ಜೆ.ಜಾರ್ಜ್ ಸ್ಪಷ್ಟನೆ
ಬೆಂಗಳೂರು: ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಹಸ್ತಕ್ಷೇಪದಿಂದ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಸುದ್ದಿ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಜಾರ್ಜ್ ಸ್ಪಷ್ಟೀಕರಣ ನೀಡಬೇಕು ಎಂದು ಶಾಸಕ ಸುನೀಲ್ ಕುಮಾರ್ ಸದನದಲ್ಲಿಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, "ನಾನೇನಾದರು ಟಿವಿಯಲ್ಲಿ ಆ ರೀತಿಯಲ್ಲಿ ಹೇಳಿದ್ದೇನಾ? ಸಂಪೂರ್ಣ ನಂಬಿಕೆ ನಮ್ಮ ಮುಖ್ಯಮಂತ್ರಿಗಳ ಮೇಲಿದೆ. ಏನಾಗಿದೆ ಟಿವಿಯವರಿಗೆ ನಾನು ಹೇಳ್ತೇನೆ. ಮೊದಲು ಹಳೆ ಕಾಲದಲ್ಲಿ ಮೂರು ಬಾರಿ ನ್ಯೂಸ್ ಹೋಗ್ತಿತ್ತು. ಬೆಳಗ್ಗೆ, ಮಧ್ಯಾಹ್ನ, ಸಂಜೆ ನ್ಯೂಸ್ ಹೋಗ್ತಿತ್ತು. ಈಗ ಒಂದೊಂದು ಗಂಟೆಗೆ ಬ್ರೇಕಿಂಗ್ ನ್ಯೂಸ್ ಬೇಕು. ಅದಕ್ಕೆ ಅವರು ಸೃಷ್ಟಿ ಮಾಡುತ್ತಿದ್ದಾರೆ. ಅವರಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಸುದ್ದಿ ಬೇಕು. ಅದಕ್ಕಾಗಿ ಹಾಗೆ ಮಾಡುತ್ತಿದ್ದಾರೆ" ಎಂದು ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಟಿವಿಯಲ್ಲಿ ಪ್ರಸಾರ ಆಗಿದ್ದು ಸತ್ಯಕ್ಕೆ ದೂರವಾದ ಮಾತು. ದಯವಿಟ್ಟು ನಾನು ಎಲ್ಲಿಯೂ ರಾಜೀನಾಮೆ ಕೊಟ್ಟಿಲ್ಲ. ಅಂತಹ ಪ್ರಶ್ನೆಯೂ ಉದ್ಭವಿಸಿಲ್ಲ. ಮುಖ್ಯಮಂತ್ರಿಯ ಮೇಲೆ ಸಂಪೂರ್ಣ ನಂಬಿಕೆಯಿಂದ ಇದ್ದೇನೆ ಎಂದು ಸ್ಪಷ್ಟನೆ ನೀಡುವುದರೊಂದಿಗೆ ಚರ್ಚೆಗೆ ಇತಿಶ್ರೀ ಹಾಡಿದರು.
ಏನಿದು ಸುದ್ದಿ?
ರಾಜ್ಯ ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿಯ ಪುತ್ರ ಯತೀಂದ್ರ ಅವರ ಹಸ್ತಕ್ಷೇಪದ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಅಸಮಾಧಾನಗೊಂಡಿದ್ದರು. ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯತೀಂದ್ರ ಅವರು ಇಂಧನ ಇಲಾಖೆ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಕಚೇರಿಯು ಇಂಧನ ಇಲಾಖೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸುವ ಕ್ರಮಗಳನ್ನು ಸಹ ಕೈಗೊಂಡಿದೆ. ಈ ಬೆಳವಣಿಗೆಗಳಿಂದ ಕೋಪಗೊಂಡ ಸಚಿವ ಕೆ.ಜೆ. ಜಾರ್ಜ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆಗೂ ಮುಂದಾಗಿದ್ದರು ಎಂದು ಕೆಲವು ಟಿವಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಈ ವಿಚಾರವನ್ನು ಶಾಸಕ ಸುನೀಲ್ ಕುಮಾರ್ ಸದನದಲ್ಲಿಂದು ಪ್ರಸ್ತಾಪಿಸಿ, ಇಂಧನ ಸಚಿವರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.