ಯಾರ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ: ಧರ್ಮಸ್ಥಳ ಪ್ರಕರಣ ಕುರಿತು ಡಾ.ಜಿ.ಪರಮೇಶ್ವರ್ ಹೇಳಿಕೆ
"ಸರಕಾರಕ್ಕೆ ಮಧ್ಯಂತರ ವರದಿ ಬಂದಿಲ್ಲ"
ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು, ದೂರುದಾರ ತಂದಿದ್ದ ತಲೆಬುರುಡೆ ಹಾಗೂ ಕೆಲವು ಕಡೆಯಿಂದ ಸಂಗ್ರಹಿಸಿರುವ ಕೆಂಪುಮಣ್ಣಿನ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬರುವವರೆಗೆ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದಿದ್ದ ಧರ್ಮಸ್ಥಳ ಪ್ರಕರಣದ ಚರ್ಚೆಗೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಯಾರ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ. ಎಫ್‍ಎಸ್‍ಎಲ್ ವರದಿ ಬರುವವರೆಗೆ ಮುಂದೆ ಹೋಗದಿರಲು ಎಸ್‍ಐಟಿ ನಿರ್ಧರಿಸಿದೆ. ಆದುದರಿಂದ, ವರದಿ ಬಂದ ಬಳಿಕ ತನಿಖೆ ಆರಂಭವಾಗುತ್ತದೆ’ ಎಂದು ಹೇಳಿದರು.
ಜು.3ರಂದು ಆ ವ್ಯಕ್ತಿ ಧರ್ಮಸ್ಥಳ ಠಾಣೆಗೆ ಹೋಗಿ ಧರ್ಮಸ್ಥಳದಲ್ಲಿ ಕೊಲೆಯಾದ ಪುರುಷರು, ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಮಹಿಳೆಯರ, ಯುವತಿಯರ ಮೃತದೇಹಗಳನ್ನು ತಾನು ಹೂತಿರುವುದಾಗಿ ದೂರು ನೀಡಿದ. ಜು.4ರಂದು ಪೊಲೀಸರು ಎಫ್‍ಐಆರ್ ಮಾಡಿದರು. ಆನಂತರ, ಆತನನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಿ ಹೇಳಿಕೆ ದಾಖಲಿಸಿದ ಬಳಿಕ ಅವರು ತನಿಖೆಗೆ ಆದೇಶಿಸಿದರು ಎಂದು ಡಾ.ಪರಮೇಶ್ವರ್ ತಿಳಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮುಖ್ಯಮಂತ್ರಿಗೆ ಪತ್ರ ಬರೆದು ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಹಾಗೂ ಅಸಹಜ ಸಾವುಗಳ ಕುರಿತು ತನಿಖೆ ಮಾಡಲು ಎಸ್‍ಐಟಿ ರಚನೆ ಮಾಡುವಂತೆ ಮನವಿ ಮಾಡಿದರು. ಜು.19ರಂದು ಸರಕಾರ ಹಿರಿಯ ಐಪಿಎಸ್ ಅಧಿಕಾರಿ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‍ಐಟಿ ರಚನೆ ಮಾಡಿತು ಎಂದು ಅವರು ಹೇಳಿದರು.
ಎಸ್‍ಐಟಿಯವರು ಆ ಅನಾಮಿಕ ವ್ಯಕ್ತಿಯಿಂದ ಮತ್ತೊಂದು ಹೇಳಿಕೆ ದಾಖಲು ಮಾಡಿಕೊಂಡು, ಆತ ಹೇಳಿದ ಸ್ಥಳಗಳನ್ನು ಗುರುತು ಹಾಕಿಕೊಂಡು ಉಪ ವಿಭಾಗ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಶೋಧ ಕಾರ್ಯ ಆರಂಭಿಸಿದರು. ಇದೊಂದು ಸೂಕ್ಷ್ಮ ವಿಚಾರ. ತನಿಖೆ ನಡೆದು ಸತ್ಯ ಹೊರಗೆ ಬರಬಾರದೆ? ಎಂದು ಅವರು ಪ್ರಶ್ನಿಸಿದರು.
ಧರ್ಮಸ್ಥಳದಲ್ಲಿ ಏನು ಆಗಿಲ್ಲ ಎಂದು ಸಾಬೀತಾದರೆ ಧರ್ಮಸ್ಥಳದ ಬಗೆಗಿನ ನಂಬಿಕೆ ಮತ್ತಷ್ಟು ಹೆಚ್ಚುತ್ತದೆ. ಒಂದು ವೇಳೆ ಅಂತಹ ಘಟನೆಗಳು ನಡೆದಿದ್ದರೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ. ಈ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಬೆರೆಸಬಾರದು. ಸತ್ಯ ಹೊರಗೆ ಬರಲಿ. ಅದನ್ನು ಎಲ್ಲರೂ ಒಪ್ಪಿಕೊಳ್ಳೊಣ ಎಂದು ಪರಮೇಶ್ವರ್ ಹೇಳಿದರು.
ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಏನು ಹೇಳಲು ಆಗುವುದಿಲ್ಲ. ಸರಕಾರಕ್ಕೆ ಮಧ್ಯಂತರ ವರದಿ ಬಂದಿಲ್ಲ. ಎಸ್‍ಐಟಿಗೆ ಕಾಲಮಿತಿ ನಿಗದಿ ಪಡಿಸಲು ಆಗುವುದಿಲ್ಲ. ಶೀಘ್ರ ವರದಿ ನೀಡಿ ಎಂದು ಹೇಳಬಹುದು ಅಷ್ಟೇ. ತನಿಖೆಗೆ ವಿಪಕ್ಷಗಳು ಸಹಕರಿಸಬೇಕು ಎಂದು ಪರಮೇಶ್ವರ್ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಸಂಪುಟ ಎಂದರೆ ಒಗ್ಗಟ್ಟಾಗಿ ಇರಬೇಕು. ಧರ್ಮಸ್ಥಳದಲ್ಲಿ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಗೃಹ ಸಚಿವರಾದ ನೀವು ಏನು ನಡೆದಿಲ್ಲ ಅನ್ನೊ ರೀತಿ ಉತ್ತರ ಕೊಡುತ್ತಿದ್ದೀರಾ ಎಂದು ಹೇಳಿದರು.
ಎಸ್‍ಐಟಿ ರಚನೆ ಮಾಡಲು ಮುಖ್ಯಮಂತ್ರಿ ಮನೆಗೆ ಪ್ರಗತಿಪರರು, ನಗರ ನಕ್ಸಲರು ಹೋಗಿ ಒತ್ತಡ ಹಾಕಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ಈಗ ದೂರುದಾರ ನನಗೆ ಮನೆ, ಹಣ ಕೊಡುತ್ತೇವೆ ಎಂದು ಆಮಿಷ ಒಡ್ಡಿದರು ಎಂದು ಹೇಳಿದ್ದಾನೆ ಎಂದು ಮಾಧ್ಯಮಗಳು ಸುದ್ದಿ ಮಾಡುತ್ತಿವೆ ಎಂದು ಅಶೋಕ್ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಎಚ್.ಸಿ.ಬಾಲಕೃಷ್ಣ, ಎಸ್‍ಐಟಿ ರಚನೆ ಮಾಡಿರುವುದನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಸ್ವಾಗತಿಸಿ, ಸ್ವತಃ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಬಿಜೆಪಿಯವರು ಇದನ್ನು ರಾಜಕೀಯಗೊಳಿಸುತ್ತಿದ್ದಾರೆ. ಕಾಂಗ್ರೆಸ್‍ನವರು ಧರ್ಮಸ್ಥಳದ ವಿರೋಧಿಗಳು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಬೇಕು ಎಂಬುದು ಸರಕಾರದ ಉದ್ದೇಶ ಎಂದು ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಆರೋಪಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಆ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಿ ಎಂದರು. ಇದರಿಂದ ಆಕ್ರೋಶಗೊಂಡು ಸುನಿಲ್ ಕುಮಾರ್ ಯಾಕೆ ತೆಗೆದು ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಇದೆಲ್ಲ ನಡೆಯುತ್ತಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಅಲ್ಲದೆ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿಯಲು ಸನಿಹ ಬರುತ್ತಿದ್ದಂತೆ ಸ್ಪೀಕರ್ ಸದನವನ್ನು 10 ನಿಮಿಷ ಮುಂದೂಡಿದರು.
ಸದನ ಮತ್ತೆ ಸೇರಿದ ಬಳಿಕ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿದ ಪರಮೇಶ್ವರ್, ನಾನು ಅತ್ಯಂತ ಜವಾಬ್ದಾರಿಯಿಂದ ಉತ್ತರ ನೀಡಿದ್ದೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು, ತಿಳಿಸಲು ಸಾಧ್ಯವಿಲ್ಲ. ಆದುದರಿಂದ, ಬಹಳ ಎಚ್ಚರಿಕೆಯಿಂದ ಉತ್ತರ ನೀಡಿದ್ದೇನೆ ಎಂದು ಹೇಳಿದರು.
ತನಿಖೆ ಮುಗಿಯುವವರೆಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಧರ್ಮಸ್ಥಳದ ಬಗ್ಗೆ ಹೇಳಿಕೆ ನೀಡುವುದನ್ನು ನಿಲ್ಲಿಸಿದರೆ, ಸತ್ಯ ಹೊರಗೆ ತರಲು ಸಾಧ್ಯವಾಗುತ್ತದೆ. ನಾವೇನು ಹಿಂದೂಗಳಲ್ಲವೆ? ಧರ್ಮಸ್ಥಳದ ಬಗ್ಗೆ ನಮಗೂ ಅಪಾರ ಗೌರವವಿದೆ. ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದೇನೆ. ಆತ್ಮಸಾಕ್ಷಿಯಿಂದಲೆ ಎಸ್‍ಐಟಿ ರಚನೆ ಮಾಡಿದ್ದೇವೆ. ರಾಜ್ಯದ ಜನರ ಎದುರು ಸತ್ಯವನ್ನು ತರುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಬಿಜೆಪಿ-ಜೆಡಿಎಸ್ ಸಭಾತ್ಯಾಗ:
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್ ಗಳ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಾ ಎಂದು ಹೇಳಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಿಲ್ಲ. ಯಾರ ಒತ್ತಡಕ್ಕೆ ಮಣಿದು ಸರಕಾರ ಎಸ್‍ಐಟಿ ರಚನೆ ಮಾಡಿತು ಎಂಬುದನ್ನು ಹೇಳಿಲ್ಲ. ಈ ಸರಕಾರ ನ್ಯಾಯ ಕೊಡಿಸುವ ನಂಬಿಕೆಯಿಲ್ಲ ಎಂದು ಆರೋಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
‘ಯೂಟ್ಯೂಬರ್ ಗಳು ವ್ಯಕ್ತಿ, ಸಂಸ್ಥೆ, ಸರಕಾರಗಳ ಬಗ್ಗೆ ಯಾವ ರೀತಿಯಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸದಿದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕಷ್ಟವಾಗುತ್ತದೆ. ಇಲ್ಲಿಗೆ ಇದನ್ನು ನಿಲ್ಲಿಸಿ, ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ಇಲ್ಲವೇ ಸರಕಾರವೆ ನಿಮ್ಮನ್ನು ನಿಯಂತ್ರಿಸಲಿದೆ. ಜನರ ಭಾವನೆ ಕೆರಳಿಸಲು ಮುಂದಾಗಬೇಡಿ. ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ವಿಧೇಯಕವನ್ನು ಇದೇ ಅಧಿವೇಶನದಲ್ಲಿ ತರಲು ಉದ್ದೇಶಿಸಲಾಗಿತ್ತು. ಆದರೆ, ಮುಂದಿನ ಅಧಿವೇಶನದಲ್ಲಿ ತರುತ್ತೇವೆ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ