×
Ad

ʼಆಪರೇಷನ್‌ ಹಸ್ತʼ ಚರ್ಚೆ ನಡುವೆ ಜೆಡಿಎಸ್​ ಶಾಸಕನ ಕಚೇರಿ ಉದ್ಘಾಟಿಸಿದ ಸಚಿವ!

Update: 2023-09-18 20:31 IST

ಯಾದಗಿರಿ: 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ  ಜೆಡಿಎಸ್ ಪಕ್ಷದ ನಡುವೆ ಮೈತ್ರಿ ಮಾತುಕತೆ ಮತ್ತು ʼಆಪರೇಷನ್‌ ಹಸ್ತʼ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.  

ಗುರುಮಠಕಲ್​​ನಲ್ಲಿ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರ ಜನ ಸಂಪರ್ಕ ಕಚೇರಿಯನ್ನು ​ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ ಸಮಾವೇಶಕ್ಕೂ ಗೈರಾಗಿದ್ದ ಶರಣಗೌಡ ಕಂದಕೂರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ನನ್ನ ಸಹಮತ ಇಲ್ಲ ಎಂದು ಹೇಳಿಕೆ ನೀಡಿದ್ದರು. 

ʼʼಸದ್ಯದ ನಿರ್ಧಾರದ ಬಗ್ಗೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನನಗೆ ಸಹಮತವಿಲ್ಲ. ಆದರೆ ಪಕ್ಷದ ನಿರ್ಧಾರವನ್ನು ಯಾರೂ ಕಡೆಗಣನೆ ಮಾಡುವುದಕ್ಕೂ ಆಗಲ್ಲ. ಆದರೆ ನಾನು ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆ. ಅಲ್ಲದೇ, ದೇವೇಗೌಡರು ಬಿಜೆಪಿ ಜೊತೆ ಮೈತ್ರಿಗೆ ನೂರಕ್ಕೆ ನೂರು ಒಪ್ಪಲ್ಲ. ಒಂದು ವೇಳೆ ಒಪ್ಪಿಗೆ ಕೊಟ್ಟರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತೆ. ನಮ್ಮ ಪಕ್ಷದ ಪರಿಸ್ಥಿತಿ ಸದ್ಯ ಬಹಳ ಹದಗೆಟ್ಟಿದೆʼʼ ಎಂದು ಅವರು ಹೇಳಿದ್ದರು. 

ಇದೀಗ ಶರಣಗೌಡ ಕಂದಕೂರು ಅವರ ಕಚೇರಿಯನ್ನು ಸಚಿವರು ಉದ್ಘಾಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News