ಜಾತಿ ಗಣತಿ ಮೂಲಕ ಬೆಣ್ಣೆ ತಿಂದು, ಉಳಿದವರಿಗೆ ನೀರು ಮಜ್ಜಿಗೆ ಕೊಡಲು ಹೊರಟಿರುವ ಸಿದ್ದರಾಮಯ್ಯ: ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ
ಹೊಸದಿಲ್ಲಿ: ಜಾತಿ ಗಣತಿ ಮೂಲಕ ಬೆಣ್ಣೆ ತಿಂದು, ಉಳಿದವರಿಗೆ ನೀರು ಮಜ್ಜಿಗೆ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆ. ಇದು ಸರಿಯಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.
ಮಂಗಳವಾರ ಹೊಸದಿಲ್ಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಿನ ಜನಗಣತಿ ಜೊತೆಯಲ್ಲಿಯೇ ಜಾತಿ ಗಣತಿಯನ್ನು ಮಾಡುತ್ತಿರುವುದು ಸ್ವಾಗತಾರ್ಹ. ಕೇಂದ್ರ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಕರ್ನಾಟಕದ ಜಾತಿಗಣತಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿಯೇ ಸಹಮತ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೆ. ನನಗೆ ಅವರು ಈವರೆಗೆ ಉತ್ತರ ಕೊಟ್ಟಿಲ್ಲ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಸಿಎಂ ಕಚೇರಿಯಲ್ಲಿ ಎಷ್ಟು ಹಿಂದುಳಿದವರು ಇದ್ದಾರೆ? ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿ ಕಚೇರಿಯಲ್ಲಿ ಅವರ ಸಮುದಾಯದ ಉದ್ಯೋಗಿಗಳು ಎಷ್ಟಿದ್ದಾರೆ? ಎನ್ನುವುದನ್ನು ಹೇಳಬೇಕು. ಅವರು ಹೇಳುತ್ತಾರೆಯೇ? ಅಂತಹ ಸಿದ್ದರಾಮಯ್ಯನವರು ನರೇಂದ್ರ ಮೋದಿಗೆ ಪಾಠ ಮಾಡುತ್ತಾರೆ ಎಂದು ದೇವೇಗೌಡ ಟೀಕಾ ಪ್ರಹಾರ ನಡೆಸಿದರು.