ಶಿವಮೊಗ್ಗ | ಸೇತುವೆ ಮೇಲೆ ರೈಲಿನಿಂದ ಬೇರ್ಪಟ್ಟ ಬೋಗಿಗಳು!
ಶಿವಮೊಗ್ಗ: ತಾಳಗುಪ್ಪ ಟು ಮೈಸೂರು ರೈಲೊಂದರ ಬೋಗಿಗಳ ನಡುವಿನ ಲಿಂಕ್ ಕಟ್ಟಾಗಿ, ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಸಂಭವಿಸಿದೆ.
ರೈಲಿನ ಒಂದಷ್ಟು ಬೋಗಿಗಳು ಬೇರ್ಪಟ್ಟು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳೀಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.
ಸೇತುವೆಯ ಮೇಲೆ ರೈಲು ನಿಧಾನವಾಗಿ ಸಂಚರಿಸಿದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ರೈಲು ಬೋಗಿಗಳು ಬೇರ್ಪಟ್ಟ ಬೆನ್ನಲ್ಲೇ, ಅದನ್ನು ಗಮನಿಸಿದ ಲೋಕೋ ಪೈಲೆಟ್ ತಕ್ಷಣ ರೈಲನ್ನು ನಿಲ್ಲಿಸಿದರು.
ಬಳಿಕ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ದೌಡಾಯಿಸಿದ್ದು, ಬೋಗಿಗಳನ್ನು ಮತ್ತೆ ಸೇರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಜನರು ಜಮಾಯಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಸ್ಥಳದಿಂದ ಚದುರಿಸಲು ಹರಸಾಹಸಪಟ್ಟರು.
►ಬೋಗಿ ಸೇರಿಸಿದ ಸಿಬ್ಬಂದಿಗಳು:
ಗಂಟೆಯ ಕಾರ್ಯಾಚರಣೆ ನಡೆಸಿದ ರೈಲ್ವೆ ಸಿಬ್ಬಂದಿಗಳು ಲಿಂಕ್ ತಪ್ಪಿದ್ದ ಬೋಗಿಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳಸಿತು.