×
Ad

ಬೆಂಗಳೂರು : ಐಎಎಫ್ ಅಧಿಕಾರಿ ಮೇಲೆ ಕನ್ನಡಿಗನಿಂದ ಹಲ್ಲೆ ಪ್ರಕರಣಕ್ಕೆ ಮಹತ್ವದ ತಿರುವು!

Update: 2025-04-22 12:00 IST

Photo credit: X

►ಬೈಕ್ ಸವಾರನಿಗೆ ಐಎಎಫ್ ಅಧಿಕಾರಿ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ‌ ಸೆರೆ

ಬೆಂಗಳೂರು: ಐಎಎಫ್ ಅಧಿಕಾರಿ ಮೇಲೆ ಕನ್ನಡಿಗನಿಂದ ಹಲ್ಲೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಬೈಕ್ ಸವಾರನ ಮೇಲೆ ಐಎಎಫ್ ಅಧಿಕಾರಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಅಧಿಕಾರಿ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ ಐಎಎಫ್ ಅಧಿಕಾರಿ ಶೀಲಾದಿತ್ಯ ಬೋಸ್ ಬೈಕ್ ಸವಾರನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ಸೆರೆಯಾಗಿದೆ. ಕನ್ನಡ ಭಾಷೆ ವಿಚಾರಕ್ಕೆ ಹಲ್ಲೆ ನಡೆದಿದೆ ಎಂದು ಐಎಎಫ್ ಅಧಿಕಾರಿ ಆರೋಪಿಸಿರುವುದು ಸುಳ್ಳು ಎನ್ನುವುದು ಬಯಲಾಗಿದೆ. ಅಧಿಕಾರಿ ಶೀಲಾದಿತ್ಯ ಬೋಸ್, ವಿಕಾಸ್ ಕುಮಾರ್ ಜೊತೆ ಜಗಳವಾಡುತ್ತಿದ್ದು, ಆತನ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ದತ್ತಾ ತಡೆಯಲು ಯತ್ನಿಸಿರುವುದು ಕಂಡು ಬಂದಿದೆ.

ಸೋಮವಾರ ಮುಂಜಾನೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕನ್ನಡ ಮಾತನಾಡುವ ಜನರ ಗುಂಪು ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿ ಆರೋಪಿಸಿದ್ದರು. ಗಾಯಗೊಂಡು ರಕ್ತ ಸುರಿಯುತ್ತಿರುವಾಗಲೇ ಬೋಸ್ ವಿಡಿಯೋ ಮಾಡಿದ್ದು ಘಟನೆ ಕುರಿತು ವಿವರಿಸಿದ್ದರು. ಅಲ್ಲದೆ ಆ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಶಿಲಾದಿತ್ಯ ಬೋಸ್ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸ್ಕ್ವಾಡ್ರನ್ ಲೀಡರ್, ಪತ್ನಿ ಮಧುಮಿತಾ ದತ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿತ್ತು.

ʼಮಧುಮಿತಾ ದತ್ತಾ ಕಾರಿನ ಬಾಗಿಲು ತೆರೆಯುವಾಗ ಆಕಸ್ಮಿಕವಾಗಿ ಬೈಕ್ ಸವಾರನಿಗೆ ತಾಗಿದೆ. ಈ ವಿಚಾರಕ್ಕೆ ನಡೆದ ವಾಗ್ವಾದ ದೈಹಿಕ ಹಿಂಸಾಚಾರಕ್ಕೆ ತಿರುಗಿದೆ. ನಂತರ ಶೀಲಾದಿತ್ಯ ಬೋಸ್ ಮುಖದ ಮೇಲೆ ರಕ್ತದಿಂದ ಕಾಣುವ ವೀಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಬೈಕ್‌ ಸವಾರ ಕನ್ನಡದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆʼ ಎಂದು ಪೊಲೀಸರು ತಿಳಿಸಿದ್ದಾರೆ.

ಐಎಎಫ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪತ್ರಕರ್ತ ಝುಬೈರ್ ಈ ಕುರಿತು ಪತ್ರಕರ್ತ ಝುಬೈರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಐಎಎಫ್ ಅಧಿಕಾರಿಯೋರ್ವ ನಾಗರಿಕನ ಮೇಲೆ ಹಲ್ಲೆ ಮಾಡಿ ಇಡೀ ದೇಶಕ್ಕೆ ಸುಳ್ಳು ಹೇಳಿದ. ಭಾಷಾ ಸಮಸ್ಯೆ ತಂದಿಟ್ಟು ಬೆಂಗಳೂರಿನ ಘನತೆಗೆ ಮಸಿ ಬಳಿದಿದ್ದಾನೆ. ಕನ್ನಡ ಮತ್ತು ಕರ್ನಾಟಕದ ವಿರುದ್ಧ ದ್ವೇಷ ಹರಡಿದ್ದಾನೆ. ತಾನು ಹಲ್ಲೆ ಮಾಡಿದರೂ ನಾನು ಪ್ರತಿ ಹಲ್ಲೆ ನಡೆಸಿಲ್ಲ ಎಂದು ಹೇಳಿದ್ದಾನೆ.

ನನ್ನ ಮೇಲೆ ಹಲ್ಲೆ ನಡೆದಾಗ ಬೆಂಬಲಿಸಿಲ್ಲ ಎಂದು ಕನ್ನಡಿಗರನ್ನು ದೂಷಿಸಿದ್ದಾನೆ. ಆತನ ಭಾವನಾತ್ಮಕ ಮನವಿಯ ನಂತರ, ಸುದ್ದಿ ವಾಹಿನಿಗಳು ಸತ್ಯವನ್ನು ಪರಿಶೀಲಿಸದೆ IAF ಅಧಿಕಾರಿಯನ್ನು ಬೆಂಬಲಿಸಿ ಏಕಪಕ್ಷೀಯವಾಗಿ ಸುದ್ದಿಯನ್ನು ಪ್ರಸಾರ ಮಾಡಿತು. ಈ ಕುರಿತು ಆಕ್ರೋಶ ಭುಗಿಲೆದ್ದ ನಂತರ ಪೊಲೀಸರು ಸ್ಥಳೀಯ ವಿಕಾಸ್ ಕುಮಾರ್‌ನನ್ನು ಬಂಧಿಸಬೇಕಾಯಿತು. ಈಗ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಬೇರೆಯದ್ದೇ ಕಥೆಯನ್ನು ಹೇಳುತ್ತಿದೆ. ಐಎಎಫ್ ಅಧಿಕಾರಿ ಸ್ಥಳೀಯನಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ಹಲ್ಲೆ ಮತ್ತು ಭಾಷಾ ವಿವಾದವನ್ನು ಪ್ರಚೋದಿಸಲು ಪ್ರಯತ್ನಿಸಿದ್ದಕ್ಕಾಗಿ ಐಎಎಫ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಧಿಕಾರಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

ಐಎಎಫ್ ಅಧಿಕಾರಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್ ಬೆನ್ನಲ್ಲೇ ಅಧಿಕಾರಿ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.


Full View

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News