×
Ad

ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ?: ಹೈಕೋರ್ಟ್ ಅಸಮಾಧಾನ

Update: 2023-08-02 21:24 IST

ಬೆಂಗಳೂರು, ಆ.2: ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತೆರವುಗೊಳಿಸದ ಬಿಬಿಎಂಪಿ ಮತ್ತು ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.  ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆಗೆ ಕಾಯುತ್ತಿದ್ದೀರಾ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಈ ಸಂಬಂಧ ಮಾಯಿಗೇ ಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. 

ಚುನಾವಣೆ ವೇಳೆ ಸಾವಿರಾರು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿತ್ತು. ಕೇವಲ 134 ದೂರು ಪರಿಗಣಿಸಿ, 40 ಎಫ್‍ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಬೆಂಗಳೂರು ಸುಂದರವಾಗಿರುವುದು ಸರಕಾರಕ್ಕೆ ಇಷ್ಟವಿಲ್ಲವೇ? ನಗರದ ತುಂಬೆಲ್ಲಾ ಬ್ಯಾನರ್, ಬಂಟಿಂಗ್ ಇರಬೇಕೆಂಬುದು ಸರಕಾರದ ಅಪೇಕ್ಷೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಬೆಂಗಳೂರಿನ ಬಗ್ಗೆ ಹೂಡಿಕೆದಾರರಿಗೆ ಎಂತಹ ಚಿತ್ರಣ ನೀಡುತ್ತಿದ್ದೀರಿ? ರಾಜ್ಯದ ಸ್ಥಿತಿ ಸುಧಾರಿಸದಿದ್ದರೆ, ಹೂಡಿಕೆ ಹೇಗೆ ತರುತ್ತೀರಿ. ಇನ್ನು ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಾಣಿಸಿದರೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ಫ್ಲೆಕ್ಸ್ ಮೂಲಕ ಶುಭಾಷಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಪೀಠವು ಬಿಬಿಎಂಪಿ ಮತ್ತು ರಾಜ್ಯ ಸರಕಾರಕ್ಕೆ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News