×
Ad

ಅಧಿಕಾರ ಹಂಚಿಕೆ ಬಗ್ಗೆ ಅನಗತ್ಯ ಚರ್ಚೆ ಪಕ್ಷ ವಿರೋಧಿ ಕೆಲಸ: ಡಿಸಿಎಂ ಡಿ.ಕೆ. ಶಿವಕುಮಾರ್

"ಹೈಕಮಾಂಡ್ ನಾಯಕರ ಸೂಚನೆ ಪಾಲಿಸುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತೇ ಅಂತಿಮ"

Update: 2025-10-02 14:06 IST

ಬೆಂಗಳೂರು, ಅ.02: “ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಮತ್ತೆ ಚರ್ಚೆ ಆರಂಭವಾಗುತ್ತಿವೆ ಎಂದು ಕೇಳಿದಾಗ, “ಯಾವ ಅಧಿಕಾರ ಹಂಚಿಕೆ ವಿಚಾರ ಇಲ್ಲ. ಈ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ. ಶಾಸಕ ರಂಗನಾಥ್ ಸೇರಿದಂತೆ ಈ ವಿಚಾರವಾಗಿ ಯಾರೆಲ್ಲಾ ಮಾತನಾಡಿದ್ದಾರೋ ಅವರಿಗೆ ನೋಟೀಸ್ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಅವರಿಗೆ ಸೂಚಿಸಿದ್ದೇನೆ. ಈ ವಿಚಾರವಾಗಿ ಚರ್ಚೆ ಮಾಡಬಾರದು ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವು ಮಾಧ್ಯಮಗಳು ಬೇರೆ ರೀತಿ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿರುವ ಮಾತು ಅಂತಿಮ. ಅದರೆ ಮೇಲೆ ಈ ವಿಚಾರವಾಗಿ ಯಾರೂ ಚರ್ಚೆ ಮಾಡುವಂತಿಲ್ಲ” ಎಂದು ತಿಳಿಸಿದರು.

“ಯಾರು ಈ ವಿಚಾರವಾಗಿ ಚರ್ಚೆ ಮಾಡುತ್ತಾರೋ ಅವರು ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ, ನನ್ನ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ” ಎಂದರು.

ಇದಕ್ಕೂ ಮುನ್ನ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡಿರುವ ಶಿವರಾಮೇಗೌಡ, ಶಾಸಕ ರಂಗನಾಥ್ ಅವರಿಗೂ ನೋಟೀಸ್ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವಿಚಾರದಲ್ಲಿ ಮಾತನಾಡಿದರೆ ಜಿ.ಸಿ ಚಂದ್ರಶೇಖರ್ ಅವರಿಗೂ ನೋಟೀಸ್ ನೀಡುವಂತೆ ಹೇಳಿದ್ದೇನೆ. ನಮ್ಮಲ್ಲಿ ಶಿಸ್ತು ಇಲ್ಲವಾದರೆ ಪಕ್ಷ ಉಳಿಯುವುದಿಲ್ಲ” ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರವೇ ಅಂತಿಮವೇ ಎಂದು ಮತ್ತೆ ಕೇಳಿದಾಗ, “ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ. ಅವರ ಮಾತೇ ಅಂತಿಮ. ನಮಗೆ ಪಕ್ಷ ಮುಖ್ಯ. ಪಕ್ಷ ಹೇಳಿದಂತೆ ನಡೆಯುವ ಶಿಸ್ತಿನ ಸಿಪಾಯಿಗಳು ನಾವು” ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಫಿಕ್ಸ್ ಆಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಬಿಜೆಪಿ ಪಕ್ಷದವರು ಅವರ ಪಕ್ಷದಲ್ಲಿನ ಕ್ರಾಂತಿ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ಅವರ ಆಂತರಿಕ ಸಮಸ್ಯೆ ಚರ್ಚೆ ಮಾಡಿ ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರಿಗೆ ಅಗತ್ಯ ಸೂಜಿದಾರವನ್ನು ನಾನು ಕಳುಹಿಸಿಕೊಡುತ್ತೇನೆ. ಅವರು ತಮ್ಮ ಪಕ್ಷದ ಹರುಕುಗಳನ್ನು ಹೊಲಿದುಕೊಳ್ಳಲಿ” ಎಂದು ತಿಳಿಸಿದರು.

ಆರ್ ಎಸ್ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಗಣವೇಷಧಾರಿಗಳಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರ ಪಕ್ಷದ ಕಾರ್ಯಕ್ರಮ ಅವರು ಮಾಡಿಕೊಳ್ಳಲಿ. ಆ ವಿಚಾರ ನನಗ್ಯಾಕೆ ಬೇಕು? ನಿಮಗೆ ಅದು ಬೇಕಾಗಿರಬಹುದು, ನಮಗೆ ಅದು ಬೇಡ. ನಮ್ಮ ಆಲೋಚನೆ ದೇಶ, ಸ್ವಾತಂತ್ರ್ಯ ವಿಚಾರ, ಗಾಂಧೀಜಿ ಅವರ ವಿಚಾರಧಾರೆಯಂತೆ ಈಶ್ವರ, ಅಲ್ಲಾ ತೇರೆ ನಾಮ್ ಎಂಬುದನ್ನು ನಾವು ಸ್ಮರಿಸುತ್ತೇವೆ. ಬಿಜೆಪಿಯವರು ಅಲ್ಲಾ ಎಂದು ಮಾತನಾಡುತ್ತಾರಾ? ಗಾಂಧೀಜಿ ಅವರ ಸಂದೇಶವನ್ನು ಬಿಜೆಪಿ ಪಾಲಿಸುತ್ತದೆಯೇ? ನಮ್ಮ ನಾಡಗೀತೆಯಲ್ಲೂ ಹಿಂದೂ, ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಸಾಲಿದೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಲಾಗಿದೆ. ಈ ಎಲ್ಲಾ ವಿಚಾರಧಾರೆಗಳನ್ನು ಸೇರಿಸಿ ಈ ದೇಶದ ಅಡಿಪಾಯ ನಿರ್ಮಾಣದ ಮಾಡಲಾಗಿದೆ. ಇವುಗಳಿಂದ ಬಿಜೆಪಿಯವರು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅದರಲ್ಲೇ ಅವರು ಜೀವನ ಮಾಡಬೇಕು” ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News