×
Ad

‘ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆ’ ಸಂಸದೀಯ ವ್ಯವಸ್ಥೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ : ಯು.ಟಿ.ಖಾದರ್

ಕಾಮನ್‍ವೆಲ್ತ್ ಸಂಸದೀಯ ಸಂಘ ಭಾರತ ವಿಭಾಗದ 11ನೆ ಸಮ್ಮೇಳನ

Update: 2025-09-11 22:02 IST

ಬೆಂಗಳೂರು, ಸೆ.11 : ಸಂಸದೀಯ ವ್ಯವಸ್ಥೆಯು ಜನರ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಮತ್ತು ಉತ್ತಮ ಆಡಳಿತವು ಜನರ ಸಾಮೂಹಿಕ ಕನಸುಗಳು ಮತ್ತು ಆಸೆಗಳನ್ನು ಪ್ರತಿಬಿಂಬಿಸುತ್ತದೆ. ಆದುದರಿಂದ, ನಿಜವಾದ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯು ಸಂಸದೀಯ ವ್ಯವಸ್ಥೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಗುರುವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾಮನ್‍ವೆಲ್ತ್ ಸಂಸದೀಯ ಸಂಘ(ಸಿಪಿಎ) ಭಾರತ ವಿಭಾಗದ 11ನೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, "ಭಾರತದ ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದ ಬೆಂಗಳೂರಿನಲ್ಲಿ ಈ ಪ್ರತಿಷ್ಠಿತ 11 ನೇ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ವಿಭಾಗದ ಸಮ್ಮೇಳನವನ್ನು ಆಯೋಜಿಸಲು ಸಾಧ್ಯವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನವು, ಕಾಮನ್ವೆಲ್ತ್ ರಾಷ್ಟ್ರಗಳ ಸಂಸದರು, ಶಾಸಕಾಂಗದ ನಾಯಕರು ಮತ್ತು ತಜ್ಞರನ್ನು ಒಟ್ಟುಗೂಡಿಸುವ ಒಂದು ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದರು.

ಇದು ಆಡಳಿತದ ಅನುಭವಗಳನ್ನು ಹಂಚಿಕೊಳ್ಳಲು, ಪರಸ್ಪರ ಕಲಿಯಲು ಮತ್ತು ಪ್ರಜಾಪ್ರಭುತ್ವದ ಉತ್ತಮ ಅಭ್ಯಾಸಗಳನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ಈ ಸಮ್ಮೇಳನವು ನಮ್ಮ ಸಂಸತ್ತುಗಳನ್ನು ಬಲಪಡಿಸಲು, ಪಾರದರ್ಶಕತೆಯನ್ನು ಉತ್ತೇಜಿಸಲು, ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಜನ ಸಾಮಾನ್ಯರು ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸಹಕಾರಿಯಾಗಿದೆ. ಕಾಯ್ದೆ ರೂಪಿಸುವುದು ಹಾಗೂ ಶಾಸಕಾಂಗ ಸುಧಾರಣೆಗಳಂತಹ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ, ಸಿಪಿಎ ಸಮ್ಮೇಳನವು ಪ್ರಜಾಪ್ರಭುತ್ವ ಸಂಸ್ಥೆಗಳ ಬಲಪಡಿಸಲು ಸಹಾಯ ನೀಡುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಕಾಮನ್‍ವೆಲ್ತ್ ಸಂಸದೀಯ ಸಂಘವನ್ನು 1911 ರಲ್ಲಿ ಸಾಮ್ರಾಜ್ಯ ಸಂಸದೀಯ ಸಂಘವಾಗಿ ಸ್ಥಾಪಿಸಲಾಯಿತು ಮತ್ತು ಇದನ್ನು 1948 ರಲ್ಲಿ ಕಾಮನ್‍ವೆಲ್ತ್ ಸಂಸದೀಯ ಸಂಘ ಎಂದು ಮರುನಾಮಕರಣ ಮಾಡಲಾಯಿತು ಎಂದರು.

ಸಂಸದೀಯ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಮೂಲಕ ಮತ್ತು ಕಾಮನ್‍ವೆಲ್ತ್ ಸದಸ್ಯ ರಾಷ್ಟ್ರಗಳಲ್ಲಿ ಉತ್ತಮ ಆಡಳಿತವನ್ನು ಉತ್ತೇಜಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಕಾಮನ್‍ವೆಲ್ತ್ ಸಂಸದೀಯ ಸಂಘವನ್ನು ಸ್ಥಾಪಿಸಲಾಯಿತು ಎಂದು ಅವರು ತಿಳಿಸಿದರು.

ಕಾಮನ್‍ವೆಲ್ತ್ ಸಂಸದೀಯ ಸಂಘ ಭಾರತ ಪ್ರದೇಶ ಸಮ್ಮೇಳನವು ಒಂದು ಅದ್ಭುತ ವೇದಿಕೆ ಮತ್ತು ಅದರ ಸದಸ್ಯ ರಾಷ್ಟ್ರಗಳ ಸಂಸದೀಯ ವ್ಯವಸ್ಥೆಗಳ ನಡುವಿನ ಸೇತುವೆಯಾಗಿದೆ. ಈ ಸಮ್ಮೇಳನವು ಪ್ರಮುಖ ಸಮಕಾಲೀನ ಸಮಸ್ಯೆಗಳು, ಸಂಸದೀಯ ವ್ಯವಸ್ಥೆಯ ಉತ್ತಮ ಅಭ್ಯಾಸಗಳ ಕುರಿತು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ಇದು ವಿವಿಧ ಚಟುವಟಿಕೆಗಳ ಮೂಲಕ ಸಂಸದೀಯ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಖಾದರ್ ಹೇಳಿದರು.

ನಮ್ಮ ಸಂಸದರು ಪ್ರಜಾಪ್ರಭುತ್ವ ನೀತಿ ನಿರೂಪಣೆ ಮತ್ತು ಸಂಸದೀಯ ಚರ್ಚೆಗಳ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯ ಮತ್ತು ಜ್ಞಾನವುಳ್ಳವರಾಗಿರಲು ಈ ಸಮ್ಮೇಳನವು ಸಹಾಯ ಮಾಡುತ್ತದೆ. ಈ ಸಂದರ್ಭವು ಕರ್ನಾಟಕ ಶಾಸಕಾಂಗಕ್ಕೆ ನಿಜವಾಗಿಯೂ ಒಂದು ಐತಿಹಾಸಿಕ ಕ್ಷಣವಾಗಿದೆ ಮತ್ತು ನಮ್ಮ ರಾಜ್ಯಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದರು.

ಈ ವರ್ಷದ ಸಮ್ಮೇಳನದ ವಿಷಯ, “ವಿಧಾನಮಂಡಲಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳು: ಜನರ ನಂಬಿಕೆ ಬೆಳೆಸುವುದು, ಜನರ ಆಶಯಗಳನ್ನು ಈಡೇರಿಸುವುದು" ಈ ವಿಷಯವು ಅತ್ಯಂತ ಸಮಯೋಚಿತ ಮತ್ತು ಪ್ರಸ್ತುತವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ, ಬೆಳಿಗ್ಗೆ 9 ಗಂಟೆಗೆ ಅಧಿವೇಶನವನ್ನು ಕರೆದರೂ ಸಹ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಸದಾ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇತ್ತೀಚಿನ ಅಧಿವೇಶನದಲ್ಲಿ ಇತ್ತೀಚಿನ ಅಧಿವೇಶನದಲ್ಲಿ 39 ಮಸೂದೆಗಳನ್ನು ಚರ್ಚೆಗೆ ತಂದಿದ್ದು, ಅವುಗಳಲ್ಲಿ 37 ಮಸೂದೆಗಳನ್ನು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ವಿವರವಾದ ಚರ್ಚೆಗಳ ನಂತರ ಅಂಗೀಕರಿಸಲಾಯಿತು. 2 ಮಸೂದೆಗಳನ್ನು ಆಯ್ಕೆ ಸಮಿತಿಗೆ ಉಲ್ಲೇಖಿಸಲಾಯಿತು. ಇಂತಹ ಆರೋಗ್ಯಕರ ಚರ್ಚೆಗಳು ಮತ್ತು ರಚನಾತ್ಮಕ ಶಾಸಕಾಂಗ ಫಲಿತಾಂಶಗಳು, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಆಸಕ್ತಿ ಮತ್ತು ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಮಾತ್ರ ಸಾಧ್ಯವಾಗುತ್ತದೆ. ಆದರೆ, ಇದನ್ನೆಲ್ಲ ಸಮರ್ಥವಾಗಿ ನಡೆಸಲು, ಸಭಾಧ್ಯಕ್ಷರು ಆತ್ಮವಿಶ್ವಾಸ, ಚಾಕಚಕ್ಯತೆ ಮತ್ತು ಜಾಣ್ಮೆಯನ್ನು ಹೊಂದಿರಬೇಕು. ಈ ಕಾರಣಕ್ಕಾಗಿಯೇ, ಸಿಪಿಎ ಸಮ್ಮೇಳನವು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ವಿವರಿಸಿದರು.

ಆದ್ದರಿಂದ ಶಾಸನ ಸಭೆಯ ಅಧ್ಯಕ್ಷರುಗಳ ಕಾರ್ಯ ಕ್ಷಮತೆ, ವಿಶ್ವಾಸ, ಜ್ಞಾನ ಮತ್ತು ಕಾರ್ಯ ತತ್ಪರತೆ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿರುವ, ಈ ಸಮ್ಮೇಳನವು ನಮ್ಮ ಸಂಸದೀಯ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗುತ್ತದೆ ಎಂದು ನನಗೆ ವಿಶ್ವಾಸವಿದೆ ಮತ್ತು ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ  ಅವರ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆ ನಮ್ಮ ಸಂಸದೀಯ ಸಂಪ್ರದಾಯಗಳಿಗೆ ಹೆಚ್ಚಿನ ಗೌರವ ಮತ್ತು ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆ ನನಗಿದೆ. ಇಂತಹ ಮಹತ್ವಪೂರ್ಣ ಸಮ್ಮೇಳನಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಅವಶ್ಯಕತೆ ಇದೆ " ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮ್ಮೇಳನದ ರೂಪುರೇಷೆಗಳ ಬಗ್ಗೆ ವಿವರಿಸುತ್ತಾ, “ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಜನರು ಅದರ ಮೇಲೆ ಇಟ್ಟಿರುವ ನಂಬಿಕೆಯಲ್ಲಿದೆ. ನಮ್ಮ ಶಾಸಕಾಂಗಗಳು ಕೇವಲ ಚರ್ಚೆಯ ವೇದಿಕೆಗಳಲ್ಲ, ಅವು ಪ್ರಜಾಪ್ರಭುತ್ವದ ನಾಡಿ ಮಿಡಿತ. ಶಾಸಕಾಂಗ ಸಭೆಯಲ್ಲಿ ಪ್ರತಿಯೊಂದು ಚರ್ಚೆಯು ರಚನಾತ್ಮಕವಾಗಿ, ಪ್ರತಿಯೊಂದು ಚರ್ಚೆಯು ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರತಿಯೊಂದು ನಿರ್ಧಾರವು ಪರಿಹಾರ-ಆಧಾರಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆಗ ಮಾತ್ರ ನಾವು ಜನರ ನಂಬಿಕೆಯನ್ನು ಗಳಿಸಬಹುದು ಅವರ ಆಕಾಂಕ್ಷೆಗಳಿಗೆ ಧ್ವನಿ ನೀಡಬಹುದು” ಎಂದರು.

“ಆದ್ದರಿಂದ, ಈ ಉದ್ಘಾಟನಾ ಸಮಾರಂಭದಲ್ಲಿ, ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಶಾಸಕಾಂಗದ ಮಾಜಿ ಕಾರ್ಯದರ್ಶಿಗಳನ್ನು ಅವರ ವಿಶಿಷ್ಟ ಸೇವೆಗಳನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಗೌರವಿಸುವ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಜೊತೆಗೆ, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲು ಐತಿಹಾಸಿಕ ನಗರವಾದ ಮೈಸೂರು ನಗರಕ್ಕೆ ಸಮ್ಮೇಳನದ ನಂತರದ ವಿಶೇಷ ಪ್ರವಾಸವನ್ನು ಏರ್ಪಡಿಸಲಾಗಿದೆ. ಈ ಸಮ್ಮೇಳನದಿಂದ ಜ್ಞಾನದ ಜೊತೆಗೆ ನಮ್ಮ ಸಂಪ್ರದಾಯ, ಸಂಸ್ಕೃತಿಯ ಅಮೂಲ್ಯ ನೆನಪುಗಳನ್ನು ಸಹ ನಮ್ಮ ಅವರು ತಮ್ಮೊಂದಿಗೆ ತೆಗೆದುಕೊಂಡು ಹೋಗಲಿದ್ದಾರೆ" ಎಂದು ತಿಳಿಸಿದರು.

ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲದೇ, ಸಾರ್ವಜನಿಕ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿತ್ತು.

Delete Edit
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News