ರಸ್ತೆ ಗುಂಡಿಗಳನ್ನು ಶೀಘ್ರದಲ್ಲೇ ಮುಚ್ಚದಿದ್ದರೆ ‘ಬೆಂಗಳೂರು ಬಂದ್’ : ವಾಟಾಳ್ ನಾಗರಾಜ್
ಬೆಂಗಳೂರು, ಅ.18 : ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚದಿದ್ದರೆ ಬೆಂಗಳೂರು ಬಂದ್ ಮಾಡಬೇಕಾಗುತ್ತೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ, ಶನಿವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಹತ್ತಿರ ‘ಎತ್ತಿನ ಬಂಡಿ’ ಓಡಿಸುವ ಮೂಲಕ ವಿನೂತನ ಚಳವಳಿ ನಡೆಸಿ, ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಕೇವಲ ಗುಂಡಿಗಳ ಸಮಸ್ಯೆ ಮಾತ್ರವಲ್ಲ, ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿದೆ. ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ಮಾಡಲಾಗಿದೆ. ಹೀಗೆ ಆದರೆ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ. ಎಲ್ಲವುಗಳ ವಿರುದ್ಧ ಬೆಂಗಳೂರು ಬಂದ್‍ಗೆ ಕರೆ ಕೊಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
‘ರಸ್ತೆಗಳಲ್ಲಿ ಗುಂಡಿ ಬಿದ್ದಿವೆ’ ಎಂದು ವಿಶ್ವದಮಟ್ಟದಲ್ಲಿ ನಮಗೆ ಅನ್ಯಾಯವಾಯಿತು ಎಂದು ಮಾತನಾಡುತ್ತಾರೆ. ಮೋಹನ್‍ದಾಸ್ ಪೈ, ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ನೀವೇನೂ ಪಾಳೆಗಾರರಾ? ಬೆಂಗಳೂರಿನ ಅಭಿವೃದ್ಧಿಗೆ ಸರಕಾರಕ್ಕೆ 30ಸಾವಿರ ಕೋಟಿ ರೂ. ನೀಡಿ, ಬೆಂಗಳೂರು ಬಿಟ್ಟು ಹೋಗುತ್ತೇವೆ ಎಂದು ಕೂಗಾಡುತ್ತೀರಿ, ಹೋಗಬಹುದು ನೀವು. ಮೋಹನ್‍ದಾಸ್ ಪೈ ನಿಮ್ಮ ನಾಯಕತ್ವದಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗಿ. ನೀವು ಕನ್ನಡದವರಿಗೆ ಉದ್ಯೋಗ ಕೊಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.